
ಗದಗ, 19 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಸಂಬಂಧ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಸಂಸ್ಥೆಗಳು ಶೀಘ್ರದಲ್ಲಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
ವಿಕಲಚೇತನರ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪಾರದರ್ಶಕಗೊಳಿಸಲು ನೋಂದಣಿ ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಶಿಕ್ಷಣ, ಆರೋಗ್ಯ, ಪುನರ್ವಸತಿ, ಕೌಶಲ್ಯಾಭಿವೃದ್ಧಿ, ಆರೈಕೆ ಹಾಗೂ ಸಾಮಾಜಿಕ ಭದ್ರತೆ ಕ್ಷೇತ್ರಗಳಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಎಲ್ಲಾ ಸಂಸ್ಥೆಗಳು ಸರ್ಕಾರದ ನಿಯಮಾನುಸಾರ ಸೇವಾ ಸಿಂಧೂ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಸಂಸ್ಥೆಗಳ ಕಾರ್ಯವೈಖರಿ, ಸೇವೆಗಳ ಗುಣಮಟ್ಟ ಹಾಗೂ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗಲಿದ್ದು, ಅಗತ್ಯವಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಹಕಾರಿಯಾಗಲಿದೆ.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ಶ್ರೀದೇವಿ ಎಸ್.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿರುವಂತೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ಸಂಸ್ಥೆಯ ವ್ಯಾಪ್ತಿಯಲ್ಲಿ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಿಸಿದ ಸಂಸ್ಥೆಯ ಮೇಲೆಯೇ ಇರುತ್ತದೆ. ಅಲ್ಲದೆ ಸರ್ಕಾರದ ಸೂಚನೆಯಂತೆ ಕಡ್ಡಾಯ ನೋಂದಣಿ ಮಾಡಿಸಿಕೊಳ್ಳದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಸ್ವಯಂಸೇವಾ ಸಂಸ್ಥೆಗಳು ಯಾವುದೇ ವಿಳಂಬ ಮಾಡದೆ ಸೇವಾ ಸಿಂಧೂ ಪೋರ್ಟಲ್ ಮೂಲಕ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 08372-220419 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಅಲ್ಲದೆ, ಗದಗ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 29ರಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ಶ್ರೀದೇವಿ ಎಸ್.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP