
ವಿಜಯನಗರ, 11 ಜುಲೈ (ಹಿ.ಸ.):
ಆ್ಯಂಕರ್:ಹೂವಿನ ಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಸರ್ಕಾರಕ್ಕೆ ತಾವೂ ಪತ್ರ ಬರೆಯುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಂ.ಪಿ. ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕರ್ನಾಟಕ ಒಬ್ಬ ಪ್ರಾಮಾಣಿಕ, ಸಿದ್ಧಾಂತನಿಷ್ಠ, ಮೌಲ್ಯಾಧಾರಿತ ಹಾಗೂ ಜನಪರ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದು ಸ್ಮರಿಸಿದರು.
ಎಂ.ಪಿ. ಪ್ರಕಾಶ್ ಅವರು ಅಧ್ಯಯನಶೀಲ, ವೈಚಾರಿಕತೆ ಹೊಂದಿದ್ದ ಅಪರೂಪದ ನಾಯಕರಾಗಿದ್ದು, ರಾಜಕೀಯ ಜೀವನದುದ್ದಕ್ಕೂ ಸಿದ್ಧಾಂತಗಳಿಗೆ ಬದ್ಧರಾಗಿ ಜನಸೇವೆಯನ್ನು ಧ್ಯೇಯವನ್ನಾಗಿಸಿಕೊಂಡಿದ್ದರು ಎಂದು ಹೇಳಿದರು. ಯಾವುದೇ ಸಮಸ್ಯೆ ಎದುರಾದಾಗ ಅವರ ಸಲಹೆ ಪಡೆಯುತ್ತಿದ್ದೆ. ಅವರು ನನಗೆ ರಾಜಕೀಯ ಸಹೋದ್ಯೋಗಿ ಮಾತ್ರವಲ್ಲ, ಮಾರ್ಗದರ್ಶಕರೂ ಆಗಿದ್ದರು ಎಂದು ನೆನಪಿಸಿಕೊಂಡರು.
ಜಾತಿ ಹಾಗೂ ಧರ್ಮದ ರಾಜಕಾರಣದಿಂದ ಸದಾ ದೂರವಿದ್ದ ಎಂ.ಪಿ. ಪ್ರಕಾಶ್ ಅವರು ಸಾಮಾಜಿಕ ನ್ಯಾಯದ ಪರ ನಿಂತ ನಾಯಕರಾಗಿದ್ದರು. ರಾಜಕೀಯ ಲಾಭಕ್ಕಾಗಿ ತಮ್ಮ ತತ್ವಗಳಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2004ರಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ನಡೆದ ಚರ್ಚೆಯಲ್ಲಿ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಎಂ.ಪಿ. ಪ್ರಕಾಶ್ ಸೂಚಿಸಿದ್ದರು ಎಂಬ ಸಂಗತಿಯನ್ನೂ ಸಿದ್ದರಾಮಯ್ಯ ಸ್ಮರಿಸಿದರು. ಹಂಪಿ ಉತ್ಸವ ಆರಂಭಿಸುವ ಕಲ್ಪನೆ ನೀಡಿ ಅದನ್ನು ಯಶಸ್ವಿಯಾಗಿ ಜಾರಿಗೆ ತಂದ ಕೀರ್ತಿಯೂ ಎಂ.ಪಿ. ಪ್ರಕಾಶ್ ಅವರಿಗೆ ಸಲ್ಲುತ್ತದೆ ಎಂದರು.
ಹೂವಿನ ಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಎಂ.ಪಿ. ಪ್ರಕಾಶ್ ಅವರ ಹೆಸರನ್ನು ನಾಮಕರಣ ಮಾಡಿದರೆ ಅವರ ಸೇವೆ ಮತ್ತು ಆದರ್ಶಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.