ಮಾದಕದ್ರವ್ಯ ಮುಕ್ತ ಕರ್ನಾಟಕ ನಮ್ಮ ಗುರಿ : ಮುಖ್ಯಮಂತ್ರಿ
ಬೆಂಗಳೂರು, 28 ಜೂನ್ (ಹಿ.ಸ.) : ಆ್ಯಂಕರ್ : ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ಯಾವುದೇ ಉತ್ಪನ್ನಗಳಲ್ಲಿ ಕಿಂಚಿತ್ತಾದರೂ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಕರ್ನಾಟಕದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲಾ ಹಾಗೂ ಗುಟ್ಕಾ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಮುಖ
Cm


ಬೆಂಗಳೂರು, 28 ಜೂನ್ (ಹಿ.ಸ.) :

ಆ್ಯಂಕರ್ : ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ಯಾವುದೇ ಉತ್ಪನ್ನಗಳಲ್ಲಿ ಕಿಂಚಿತ್ತಾದರೂ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಕರ್ನಾಟಕದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲಾ ಹಾಗೂ ಗುಟ್ಕಾ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವ್ಯಸನದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಹೇಳಿದರು.

ಮಾದಕದ್ರವ್ಯ ಮುಕ್ತ ಕರ್ನಾಟಕ ನಮ್ಮ ಗುರಿ

ಪಾನ್ ಮಸಾಲಾ, ಗುಟ್ಕಾ, ಅಡಿಕೆ ಸೇರಿದಂತೆ ವಿವಿಧ ಉತ್ಪನ್ನಗಳಲ್ಲಿ ಅಮಲು ತರಿಸುವ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಆರೋಪಗಳು ಸತ್ಯವಾಗಿದ್ದರೆ ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟವನ್ನು ನಿಷೇಧಿಸುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾದಕದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಪ್ರಮುಖ ಗುರಿಯಾಗಿದೆ. ಯುವಜನರು ವ್ಯಸನದ ಜಾಲಕ್ಕೆ ಸಿಲುಕದಂತೆ ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿಪರರು ಈ ಜಾಗೃತಿ ಅಭಿಯಾನದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೆಚ್ಚುಗೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲೇ ಅತಿದೊಡ್ಡ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವಾಗಿದ್ದು, ಅತಿ ಹೆಚ್ಚು ವೈದ್ಯರನ್ನು ರೂಪಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟೊಂದು ವೈದ್ಯಕೀಯ ಕಾಲೇಜುಗಳಿಲ್ಲ ಎಂದು ಹೇಳಿದರು.

ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿ ಅಭಿನಂದಿಸಿದರು.

ಕರ್ನಾಟಕ ವೈದ್ಯಕೀಯ ರಾಜಧಾನಿ

ಕರ್ನಾಟಕದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕ ಆಸ್ಪತ್ರೆಗಳಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಕಾರಣದಿಂದ ಕರ್ನಾಟಕವನ್ನು ದೇಶದ ವೈದ್ಯಕೀಯ ರಾಜಧಾನಿಯೆಂದು ಕರೆಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು ನಗರದ ಅನುಕೂಲಕರ ಹವಾಮಾನವನ್ನು ಉಲ್ಲೇಖಿಸಿದ ಅವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್ಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande