
ಬಾಗಲಕೋಟೆ, 13 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಪುನರ್ವಸತಿ ಪ್ರಾಧಿಕಾರ (BTDA) ಕಚೇರಿಯಲ್ಲಿ ಸಂತ್ರಸ್ತರ ಸಮಸ್ಯೆಗಳ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರ ಕೆಲಸಗಳಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಂತ್ರಸ್ತರ ಹಕ್ಕುಪತ್ರ, ಪುನರ್ವಸತಿ ಹಾಗೂ ವಿವಿಧ ಆಡಳಿತಾತ್ಮಕ ಕೆಲಸಗಳಿಗಾಗಿ ಕಚೇರಿಗೆ ಆಗಮಿಸಿದ್ದ ಕೆಲವರು, ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. BTDA ಅಧ್ಯಕ್ಷರ ಸಮ್ಮುಖದಲ್ಲೇ ಅಧಿಕಾರಿಗಳನ್ನು ಪ್ರಶ್ನಿಸಿದ ಸಂತ್ರಸ್ತರು, ಜನರ ಕೆಲಸಗಳು ಯಾವುದೇ ಮಧ್ಯವರ್ತಿಗಳ ಪ್ರಭಾವವಿಲ್ಲದೆ ನಡೆಯಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಆಡಳಿತ ವ್ಯವಸ್ಥೆಯಲ್ಲಿ ಕೆಲ ವರ್ಷಗಳಿಂದ ಕೆಲ ಖಾಸಗಿ ವ್ಯಕ್ತಿಗಳ ಪ್ರಭಾವದ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಯಾವುದೇ ಕಡತಗಳ ವಿಲೇವಾರಿ, ಸಹಿ ಅಥವಾ ಸರ್ಕಾರಿ ಕೆಲಸಗಳು ವಿಳಂಬವಾಗದಂತೆ ಅಧಿಕಾರಿಗಳು ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದರು
ಹಿಂದಿನ ಶಾಸಕರ ಅವಧಿಯಿಂದಲೂ ಕೆಲವು ವ್ಯಕ್ತಿಗಳ ಪ್ರಭಾವದ ಬಗ್ಗೆ ಜನರಲ್ಲಿ ಅಸಮಾಧಾನವಿದೆ ಎಂದು ಆರೋಪಿಸಿದ ಸಂತ್ರಸ್ತರು, ಈಗ ಜನಪ್ರತಿನಿಧಿಗಳು ಬದಲಾಗಿದ್ದರೂ ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಕಚೇರಿಗಳು ಜನರ ಸೇವೆಗಾಗಿ ಇರಬೇಕು. ತಮ್ಮ ಹಕ್ಕಿನ ಕೆಲಸಕ್ಕಾಗಿ ಬರುವ ಬಡ ಸಂತ್ರಸ್ತರು ಯಾರದ್ದೋ ಅನುಮತಿ ಪಡೆಯುವ ಪರಿಸ್ಥಿತಿ ಬರಬಾರದು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
BTDA ಕಚೇರಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.
ಸಂತ್ರಸ್ತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಹಾಗೂ ಕಚೇರಿಯ ಕಾರ್ಯವೈಖರಿಯಲ್ಲಿ ಸ್ಪಷ್ಟತೆ ತರಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande