ಬೆಂಗಳೂರಿನಲ್ಲಿ ಅತ್ಯಾಧುನಿಕ ‘ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ’ ಉದ್ಘಾಟನೆ
ಬೆಂಗಳೂರು, 07 ಮೇ (ಹಿ.ಸ.) : ಆ್ಯಂಕರ್ : ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು, ಸಾಂಕ್ರಾಮಿಕ ರೋಗಗಳು ಹಾಗೂ ಪ್ರಕೃತಿ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅತ್ಯಾಧುನಿಕ ‘ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್
Inauguration


ಬೆಂಗಳೂರು, 07 ಮೇ (ಹಿ.ಸ.) :

ಆ್ಯಂಕರ್ : ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು, ಸಾಂಕ್ರಾಮಿಕ ರೋಗಗಳು ಹಾಗೂ ಪ್ರಕೃತಿ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅತ್ಯಾಧುನಿಕ ‘ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ’ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಲೋಕಾರ್ಪಣೆಗೊಳಿಸಿದರು.

ಕೋವಿಡ್ನಂತಹ ಸಾಂಕ್ರಾಮಿಕ ರೋಗಗಳು, ನೆರೆ, ಭೂಕಂಪ, ಬೆಂಕಿ ಅವಘಡಗಳು ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಮೇಲ್ವಿಚಾರಣೆ, ಸಮನ್ವಯ ಹಾಗೂ ತ್ವರಿತ ಪ್ರತಿಕ್ರಿಯೆ ಅತ್ಯಂತ ಅಗತ್ಯವಾಗಿದ್ದು, ಈ ಕೇಂದ್ರವು ಆರೋಗ್ಯ ವ್ಯವಸ್ಥೆಯ ಕೇಂದ್ರ ನಿಯಂತ್ರಣ ಘಟಕವಾಗಿ ಕಾರ್ಯನಿರ್ವಹಿಸಲಿದೆ.

ಈ ಕಾರ್ಯಾಚರಣೆ ಕೇಂದ್ರವು ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ನಿರ್ಧಾರ ಕೈಗೊಳ್ಳುವುದು, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ನೈಜ-ಸಮಯದ ಮಾಹಿತಿ ನಿರ್ವಹಣೆಗೆ ನೆರವಾಗಲಿದೆ. ಜೊತೆಗೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಕೇಂದ್ರದಲ್ಲಿ ವೀಡಿಯೋ ವಾಲ್, ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ, ಡೇಟಾ ಸರ್ವರ್, ನೈಜ-ಸಮಯದ ಡ್ಯಾಶ್ಬೋರ್ಡ್ ಸೇರಿದಂತೆ ಹಲವು ಹೈಟೆಕ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಆರೋಗ್ಯ ಪರಿಸ್ಥಿತಿಯನ್ನು ಒಂದೇ ಸ್ಥಳದಿಂದ ನಿಗಾ ವಹಿಸಲು ಸಾಧ್ಯವಾಗಲಿದೆ.

ಈ HEOC ನಾಲ್ಕು ಹಂತಗಳಲ್ಲಿ ಕಾರ್ಯನಿರ್ವಹಿಸಲಿದ್ದು, ‘ವಾಚ್ ಮೋಡ್’, ‘ಅಲರ್ಟ್ ಮೋಡ್’, ‘ಪ್ರತಿಕ್ರಿಯೆ ಮೋಡ್’ ಹಾಗೂ ‘ಪುನಶ್ಚೇತನ ಮೋಡ್’ ಮೂಲಕ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ಭವಿಷ್ಯದ ಆರೋಗ್ಯ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಅತ್ಯಗತ್ಯ. ಈ ಕೇಂದ್ರ ರಾಜ್ಯದ ಸಾರ್ವಜನಿಕ ಆರೋಗ್ಯ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ಹೇಳಿದರು.

ಅತ್ಯಾಧುನಿಕ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಿ ಕಾರ್ಯಾರಂಭಗೊಳಿಸಿರುವ ದೇಶದ ಮೊದಲ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಈ ಯೋಜನೆ ರಾಷ್ಟ್ರ ಮಟ್ಟದಲ್ಲಿಯೂ ಮಾದರಿಯಾಗಿದೆ. ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಇನ್ನಷ್ಟು ಆಧುನೀಕರಿಸುವ ದಿಸೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande