


ಬಳ್ಳಾರಿ, 07 ಮೇ (ಹಿ.ಸ.) :
ಆ್ಯಂಕರ್ : ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಯಲು ಸರ್ಕಾರ ತ್ವರಿತವಾಗಿ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ತುಂಗಭದ್ರ ರೈತ ಸಂಘದ ರಾಜ್ಯಾಧ್ಯಕ್ಷ ಡಾ. ಜಿ. ಪುರುಷೋತ್ತಮ ಗೌಡ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ತುಂಗಭದ್ರ ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ಹೂಳಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಹೂಳು ಸಂಗ್ರಹವಾಗುತ್ತಿರುವ ಕಾರಣ ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಅಂದಾಜಿನ ಪ್ರಕಾರ 30 ಟಿಎಂಸಿ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ನೀರಿಗಿಂತಲೂ ಹೂಳು ಹೆಚ್ಚಾಗಲಿದೆ ಎಂದರು.
ಕರ್ನಾಟಕ ಸರ್ಕಾರ ತುಂಗಭದ್ರ ಜಲಾಶಯದಲ್ಲಿ ಹೂಳನ್ನು ತೆಗೆಯಲು ತಕ್ಷಣವೇ ಯೋಜನೆ ರೂಪಿಸಿ, ಜಾರಿ ಮಾಡಬೇಕು. ಇಲ್ಲವಾದಲ್ಲಿ ಜಲಾಶಯದ ಅಚ್ಚುಕಟ್ಟಿನ ವ್ಯಾಪ್ತಿಯ ಎಲ್ಲಾ ರೈತರನ್ನು ಒಗ್ಗೂಡಿಸಿಕೊಂಡು, ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ತುಂಗಭದ್ರ ಮಂಡಳಿಯ ನೀರಿನ ಸಂಗ್ರಹ ಸೇರಿ ಸಂಪೂರ್ಣ ಮಾಹಿತಿ ಹೊಂದಿರುವ ನಿವೃತ್ತ ಅಧಿಕಾರಿ ಬಿ.ಎಸ್. ಹುದ್ಯಾಳ್ ಅವರು, ಜಲಾಶಯದಲ್ಲಿ ಹೆಚ್ಚುತ್ತಿರುವ ಹೂಳು ನೀರು ಸಂಗ್ರಹ ಸಾಮಥ್ರ್ಯವನ್ನು ಹಾಳು ಮಾಡುತ್ತಿದೆ. 2017ರಲ್ಲಿಯೇ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ `ಹೂಳಿನ ಜಾತ್ರೆ' ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಲಾಗಿತ್ತು. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತುಂಗಭದ್ರ ಜಲಾಶಯಕ್ಕೆ ಒಂದು ಅಡಿ ಎತ್ತರದ ಕ್ರಸ್ಟ್ ಗೇಟ್ ಅನ್ನು ಅಳವಡಿಸಿದ್ದರೂ ಜಲಾಶಯದ ನೀರು ಸಂಗ್ರಹಮಟ್ಟ ಹೆಚ್ಚಾಗಿಲ್ಲ.
ಡ್ಯಾಂನ ನೀರು ಸಂಗ್ರಹ ಸಾಮಥ್ರ್ಯ ಕೇವಲ 102 ಅಡಿ ಮಟ್ಟಕ್ಕೆ ಸೀಮಿತವಾಗಿದೆ. ಕಾರಣ ಸರ್ಕಾರ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಸಲು ತಕ್ಷಣದಿಂದಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ತುಂಗಭದ್ರ ಜಲಾಶಯದ ಹೊರ ವಲಯ ಮತ್ತು ಹಿನ್ನೀರಲ್ಲಿ - ಜಲಾಶಯದ ಆಣೆಕಟ್ಟಿನ ಸುರಕ್ಷತೆ - ಭದ್ರತೆಗೆ ಧಕ್ಕೆ ಆಗದಂತೆ ಹೂಳನ್ನು ತೆಗೆಯಲು ತುಂಗಭದ್ರ ರೈತ ಸಂಘ `ಹೂಳೆತ್ತುವ ಯೋಜನೆ' ಹಮ್ಮಿಕೊಂಡಿದ್ದು, ಅಧಿಕಾರಿಗಳು ಸಹಕಾರ ನೀಡಬೇಕು. ಹಿನ್ನೀರು ಮತ್ತು ಹೊರ ವಲಯದಲ್ಲಿ ಹೂಳನ್ನು ತೆಗೆಯುವುದರಿಂದ ನೀರಿನ ಸಂಗ್ರಹದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಆದರೆ, ನಮ್ಮ ಪ್ರಯತ್ನಕ್ಕೆ ಅಧಿಕಾರಿಗಳು, ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದೊಡ್ಡ ದಾಸಪ್ಪ, ಕೊಂಚಗೇರಿ ರಾಜಗೌಡ, ವೀರಭದ್ರಗೌಡ, ಶ್ರೀಧರ್, ಧರೂರ್ ಬಸವರಾಜ್, ಗೋವಿಂದಪ್ಪ ಸೇರಿ ತುಂಗಭದ್ರ ರೈತ ಸಂಘದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್