
ಬೆಂಗಳೂರು, 06 ಮೇ (ಹಿ.ಸ.) :
ಆ್ಯಂಕರ್ : ಆರೋಗ್ಯ ಇಲಾಖೆ ಕೇವಲ ಸರ್ಕಾರಿ ಕಚೇರಿಯಲ್ಲ, ಅದು ಜನರ ಪಾಲಿನ “ಸಂಜೀವಿನಿ” ಎಂಬುದಾಗಿ ಹೇಳಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಲಾಖೆಯಲ್ಲಿ ಅಶಿಸ್ತಿನ ವರ್ತನೆಗೆ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಮಾಹಿತಿ ಹಂಚಿಕೊಂಡ ಅವರು, ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರು ಮತ್ತು ಸಿಬ್ಬಂದಿಯ ಅಶಿಸ್ತಿನ ವರ್ತನೆಗಳ ಬಗ್ಗೆ ವರದಿಗಳು ತಮ್ಮ ಗಮನಕ್ಕೆ ಬಂದಿವೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕರ್ತವ್ಯದ ವೇಳೆಯಲ್ಲಿ ಮದ್ಯಪಾನ ಮಾಡುವುದು ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜಶೇಖರ್ ಸಜ್ಜನ ಅವರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದು ಹಾಗೂ ಕರ್ತವ್ಯ ಲೋಪ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರೇ ಆಗಿದ್ದರೂ, ತಮ್ಮ ಹುದ್ದೆ ಅಥವಾ ಪ್ರಭಾವವನ್ನು ಪರಿಗಣಿಸದೆ ಸಾರ್ವಜನಿಕರ ಮುಂದೆ ಅಶಿಸ್ತಿನಿಂದ ವರ್ತಿಸಿದರೆ ಕ್ಷಣಾರ್ಧದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಪ್ರತಿಯೊಬ್ಬರೂ ಜನರಿಗೆ ಉತ್ತರದಾಯಿಯಾಗಿರಬೇಕು. ಬಡವರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಅಥವಾ ಇಲಾಖೆಯ ಘನತೆಗೆ ಧಕ್ಕೆ ತರುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಆರೋಗ್ಯ ಇಲಾಖೆ ಉದ್ಯೋಗವು ಜನಸೇವೆಗಾಗಿ ಎಂಬುದನ್ನು ಮನಗಂಡು, ಶಿಸ್ತು ಉಲ್ಲಂಘಿಸುವವರಿಗೆ ಇಲ್ಲಿ ಸ್ಥಾನವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa