
ಗದಗ, 26 ಮೇ (ಹಿ.ಸ.) :
ಆ್ಯಂಕರ್ : ಗದಗ-ಬೆಟಗೇರಿ ನಗರದ ವಾರ್ಡ್ ನಂ. ೧೦ರ ಕುರಹಟ್ಟಿ ಪೇಟೆಯಲ್ಲಿ ₹೧ ಕೋಟಿ ವೆಚ್ಚದ ಸಿ.ಸಿ ರಸ್ತೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯು ಸುಮಾರು ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
“ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತಾಗಬೇಕು. ಕಾಮಗಾರಿಯ ಪ್ರತಿಯೊಂದು ಹಂತದಲ್ಲೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು,” ಎಂದು ಎಚ್ ಕೆ ಪಾಟೀಲರು ಎಚ್ಚರಿಕೆ ನೀಡಿದರು.
ಅವರು ಮುಂದುವರಿದು, ನಗರಾಭಿವೃದ್ಧಿಯ ದೃಷ್ಟಿಯಿಂದ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದ್ದು, ರಸ್ತೆ, ಕುಡಿಯುವ ನೀರು ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಕುರಹಟ್ಟಿ ಪೇಟೆ ಭಾಗದಲ್ಲಿ ಉತ್ತಮ ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದ್ದು, ಸಂಚಾರ ವ್ಯವಸ್ಥೆಯೂ ಸುಧಾರಿಸಲಿದೆ ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ತಾನ ಯೋಜನೆಯಡಿ ವಾರ್ಡ್ ನಂ. ೧೦ರಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡವನ್ನು ಸಚಿವರು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಸಚಿವರು, ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯ ಅಂಗನವಾಡಿಗಳಲ್ಲಿಯೇ ನಿರ್ಮಾಣವಾಗುತ್ತದೆ ಎಂದು ಹೇಳಿದರು.
“ಅಂಗನವಾಡಿಗಳು ಕೇವಲ ಪೋಷಣಾ ಕೇಂದ್ರಗಳಲ್ಲ; ಮಕ್ಕಳ ಬೌದ್ಧಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಮೊದಲ ಪಾಠಶಾಲೆಗಳಾಗಿವೆ. ಉತ್ತಮ ಕಟ್ಟಡಗಳು ಮತ್ತು ಸಮರ್ಪಕ ಸೌಲಭ್ಯಗಳೊಂದಿಗೆ ಅಂಗನವಾಡಿಗಳು ಗುಣಮಟ್ಟದ ಶಿಕ್ಷಣ ಕೇಂದ್ರಗಳಾಗಿ ರೂಪುಗೊಳ್ಳಬೇಕು,” ಎಂದು ಸಚಿವ ಎಚ್ ಕೆ ಪಾಟೀಲರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಸಭಾ ಸದಸ್ಯ ಇಮ್ತಿಯಾಜ್ ಶಿರಹಟ್ಟಿ, ಮುಖ್ಯಸ್ಥರಾದ ಜಾಂಗೀರ ಅಣ್ಣೀಗೇರಿ, ಈಶ್ವರ ಗದುಗಿನ, ಹಣಗಿ ಭಾಷಾ, ಇಬ್ರಾಹಿಂ ಶಿರಹಟ್ಟಿ, ಸೋಪೀನ್ ಅಣ್ಣಿಗೇರಿ, ಫಾರುಕ್ ಮಖಾಂದಾರ್, ಯಾಶೀನ್, ಬಸವರಾಜ ಕಡೇಮನಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP