

ಬಳ್ಳಾರಿ, 26 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದ್ದಾರೆ.
ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್ ನಲ್ಲಿ ಮಂಗಳವಾರ ಜನನ ಮತ್ತು ಮರಣ ನೊಂದಣಿ ಪ್ರಕ್ರಿಯೆ, ಬೆಳೆ ಅಂದಾಜು ಸಮೀಕ್ಷೆ ಹಾಗೂ ಕೃಷಿ ಗಣತಿಯ ವಿವಿಧ ಹಂತಗಳ ಪ್ರಗತಿ ಕುರಿತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಜನನ ಅಥವಾ ಮರಣ ಸಂಭವಿಸಿದಾಗ ಅದನ್ನು ನಿಗದಿತ ಅವಧಿಯೊಳಗೆ ನೋಂದಾಯಿಸುವುದು ಕಡ್ಡಾಯವಾಗಿದೆ. ತಾಲ್ಲೂಕು ಮಟ್ಟದ ಜನನ ಮತ್ತು ಮರಣ ಸಮನ್ವಯ ಸಮಿತಿ ಸಭೆಗಳು ಕಡ್ಡಾಯವಾಗಿ ಜರುಗಿಸಬೇಕು. ಈ ಕುರಿತು ಆಯಾ ತಾಲ್ಲೂಕು ತಹಶೀಲ್ದಾರರು ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ಜನನ ಅಥವಾ ಮರಣ ಸಂಭವಿಸಿದ 21 ದಿನಗಳ ಒಳಗಾಗಿ ಉಚಿತವಾಗಿ ನೋಂದಣಿ ಮಾಡಬಹುದು. 21 ದಿನಗಳು ಕಳೆದ ನಂತರ ಮತ್ತು 30 ದಿನಗಳ ಒಳಗಾಗಿ ಸಣ್ಣ ಪ್ರಮಾಣದ ತಡಶುಲ್ಕ ಪಾವತಿಸಿ ನೋಂದಾಯಿಸಬಹುದು. 30 ದಿನಗಳ ನಂತರ ಮತ್ತು 1 ವರ್ಷದ ಒಳಗಾಗಿ ನೋಂದಣಿ ಮಾಡಬೇಕಾದರೆ ನಿಗದಿತ ಪ್ರಾಧಿಕಾರದ ಅನುಮತಿ ಮತ್ತು ತಡಶುಲ್ಕ ಬೇಕಾಗುತ್ತದೆ.
ಒಂದು ವರ್ಷ ಕಳೆದರೆ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮಾತ್ರ ನೋಂದಣಿ ಮಾಡಲು ಅವಕಾಶವಿರುತ್ತದೆ. ಹಾಗಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಗದಿತ ಅವಧಿಯೊಳಗೆ ನೋಂದಾಯಿಸಿಕೊಳ್ಳುವಂತೆ ಸೂಚಿಸಬೇಕು ಎಂದರು.
ಕೆಲವು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮಗುವಿನ ಜನನ ಅಥವಾ ವ್ಯಕ್ತಿಯ ಮರಣದ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡದಿರುವುದು ವಿಳಂಬಕ್ಕೆ ಕಾರಣವಾಗಿದೆ. ಆಧಾರ್ ಕಾರ್ಡ್, ವಿಳಾಸದ ಪುರಾವೆ ಮತ್ತು ಆಸ್ಪತ್ರೆಯ ದಾಖಲೆಗಳಲ್ಲಿ ಸಣ್ಣ ತಪ್ಪುಗಳಿದ್ದರೂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಅಥವಾ ಮರುಪರಿಶೀಲನೆಗೆ ಕಳುಹಿಸಲಾಗುತ್ತಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳು ಸಕಾಲದಲ್ಲಿ ಸಿಗದೇ ಇರುವುದರಿಂದ ಜನಸಾಮಾನ್ಯರ ದೈನಂದಿನ ಕೆಲಸಗಳಿಗೆ ಭಾರಿ ಹಿನ್ನಡೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಸಿರಗುಪ್ಪ, ಸಂಡೂರು ಹಾಗೂ ಕುರುಗೋಡು ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಕಟಾವು ಪ್ರಯೋಗಗಳನ್ನು ತಪ್ಪಿಲ್ಲದಂತೆ ನಮೂದಿಸಬೇಕು. ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
*ಡಿಜಿಟಲ್ ತಂತ್ರಜ್ಞಾನದ ಬಳಕೆ:*
ಬೆಳೆ ಅಂದಾಜು ಸಮೀಕ್ಷೆಗಳನ್ನು ಹೆಚ್ಚು ಪಾರದರ್ಶಕ ಹಾಗೂ ನಿಖರವಾಗಿಸಲು ತಂತ್ರಜ್ಞಾನ ಆಧಾರಿತ ವರದಿ ಸರಣಿಯನ್ನು ಬಳಸಲಾಗುತ್ತಿದೆ. ಕಟಾವು ಪ್ರಯೋಗಗಳ ಐಡಿ ಗಳ ಮೂಲಕ ಪ್ರತಿಯೊಂದು ಕಟಾವು ಪ್ರಕ್ರಿಯೆಯ ಪ್ರಗತಿಯನ್ನು ಆನ್ಲೈನ್ನಲ್ಲಿ ನಮೂದಿಸಲಾಗುತ್ತಿದ್ದು, ತಪ್ಪುಗಳಿಗೆ ಆಸ್ಪದವಿಲ್ಲದಂತೆ ದತ್ತಾಂಶ ನಿರ್ವಹಣೆ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪತ್ರಿಬಸಪ್ಪ ಅವರು ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ವಿಭಾಗದ ಮಾಹಿತಿಯನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಕಳೆದ ಸಾಲಿನಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದ ಟ್ರಾಮಾ ಕೇರ್ ಆಸ್ಪತ್ರೆಯ ಉಪ ನೋಂದಣಾಧಿಕಾರಿ ಡಾ.ರಮೇಶ್ ಅವರಿಗೆ ಜಿಲ್ಲಾಧಿಕಾರಿಯವರು ಅಭಿನಂದನಾ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ಕಂದಾಯ, ಕೃಷಿ ಅಧಿಕಾರಿಗಳು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲ್ಲೂಕಿನ ತಹಸೀಲ್ದಾರರು, ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್