ಶಾಲಾ ಸಮವಸ್ತ್ರ ನಿಯಮ ಸಡಿಲಿಕೆ ; ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಬೆಂಗಳೂರು, 14 ಮೇ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮವನ್ನು ಸಡಿಲಗೊಳಿಸಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ಶಿಕ್ಷಣ ಕ್ಷೇತ್ರದಲ್ಲಿ ಮತೀಯ ವಿಭಜನೆಗೆ ದಾರಿ ಮಾಡಿಕೊಡುವ
BYV


ಬೆಂಗಳೂರು, 14 ಮೇ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮವನ್ನು ಸಡಿಲಗೊಳಿಸಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ಶಿಕ್ಷಣ ಕ್ಷೇತ್ರದಲ್ಲಿ ಮತೀಯ ವಿಭಜನೆಗೆ ದಾರಿ ಮಾಡಿಕೊಡುವ ಅಪಾಯಕಾರಿ ನಿರ್ಧಾರ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ ಎಂದು ಹೇಳಿದ್ದಾರೆ.

“ಸಮವಸ್ತ್ರದ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಸಮಾನತೆ, ಶಿಸ್ತು ಮತ್ತು ಸಹೋದರತ್ವದ ಭಾವನೆ ಬೆಳೆಸುವುದಾಗಿದೆ. ಜಾತಿ, ಮತ, ಆರ್ಥಿಕ ಭೇದಗಳನ್ನು ಮರೆಸಿ ‘ನಾವೆಲ್ಲರೂ ಒಂದೇ’ ಎಂಬ ಮನೋಭಾವ ಬೆಳೆಸುವ ಕಾರ್ಯವನ್ನು ಸಮವಸ್ತ್ರ ಮಾಡುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಶಾಲಾ ಆವರಣದಲ್ಲಿಯೇ ಮತೀಯ ವಿಭಜನೆಗೆ ಅವಕಾಶ ಮಾಡಿಕೊಡುತ್ತಿದೆ” ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲ್ ಧರಿಸುವುದನ್ನು ನಿಷೇಧಿಸಿರುವ ಕ್ರಮವನ್ನು ಅವರು “ತುಘಲಕ್ ಆದೇಶ” ಎಂದು ಟೀಕಿಸಿದ್ದಾರೆ. “ಶಿಕ್ಷಣ ಸಂಸ್ಥೆಗಳು ಜ್ಞಾನ ಸರೋವರಗಳಂತಿವೆ. ಇಲ್ಲಿ ಸಮವಸ್ತ್ರ ಶಿಸ್ತು ಮತ್ತು ಸಮಭಾವ ಬೆಳೆಸುವ ಪ್ರಮುಖ ಅಂಶವಾಗಿದೆ. ಕೋಮು ಸಂಕೇತಗಳನ್ನು ಪ್ರತಿನಿಧಿಸುವ ವಸ್ತ್ರಗಳಿಗೆ ಅವಕಾಶ ನೀಡುವುದು ಶಿಕ್ಷಣ ವ್ಯವಸ್ಥೆಯ ಪಾವಿತ್ರ್ಯತೆಯನ್ನೇ ಹಾಳುಮಾಡುವ ಕೆಲಸ” ಎಂದು ಅವರು ಹೇಳಿದ್ದಾರೆ.

ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಮೇಲೂ ಆಕ್ರೋಶ ವ್ಯಕ್ತಪಡಿಸಿರುವ ವಿಜಯೇಂದ್ರ, “ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಟ್ಟಡಗಳ ಸುರಕ್ಷತೆ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಸರ್ಕಾರ ವಿಫಲವಾಗಿದೆ. ಶಿಕ್ಷಣ ಸುಧಾರಣೆಯ ಬದಲು ಈಗಿರುವ ವ್ಯವಸ್ಥೆಯನ್ನೇ ಕುಲಗೆಡಿಸುವ ಕಾರ್ಯ ನಡೆಯುತ್ತಿದೆ” ಎಂದು ದೂರಿದ್ದಾರೆ.

ಹಿಜಾಬ್ ಅನುಮತಿ ಕುರಿತ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಂಟಾಗುವ ಪರಿಸ್ಥಿತಿಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande