ಜಲಧಾರೆ-ಹರ್ ಘರ್ ಜಲ್ ಯೋಜನೆಗೆ ವೇಗದ ಸ್ಪರ್ಶ
ವಿಜಯಪುರ, 14 ಮೇ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಮಹತ್ವಾಕಾಂಕ್ಷೆಯ “ಜಲಧಾರೆ” ಹಾಗೂ “ಹರ್ ಘರ್ ಜಲ್” ಯೋಜನೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು
ಸಭೆ


ವಿಜಯಪುರ, 14 ಮೇ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಮಹತ್ವಾಕಾಂಕ್ಷೆಯ “ಜಲಧಾರೆ” ಹಾಗೂ “ಹರ್ ಘರ್ ಜಲ್” ಯೋಜನೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿಗಳಿಗೆ ವೇಗ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಬಹು ಗ್ರಾಮ ಕುಡಿಯುವ ನೀರು ಜಲಧಾರೆ ಯೋಜನೆ ಹಾಗೂ ಜಲ್ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಜಲಧಾರೆ ಯೋಜನೆ ಶೇ.81.25ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ಗಂಭೀರ ವಿಷಯ ಎಂದು ಹೇಳಿದರು. 2027ರ ಫೆಬ್ರುವರಿಯೊಳಗೆ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಬೇಕೆಂದು ಗಡುವು ನಿಗದಿಪಡಿಸಿದರು.

ಪೈಪ್ಲೈನ್ ಕಾಮಗಾರಿ ವಿಳಂಬಕ್ಕೆ ಗರಂ

ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪೈಪ್ಲೈನ್ ಕಾಮಗಾರಿ ಇನ್ನೂ ಬಾಕಿ ಉಳಿದಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಸಿಇಒ ಹೇಳಿದರು. ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಈಗಾಗಲೇ ಪರಿಹಾರವಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರುವುದು ನಿರ್ಲಕ್ಷ್ಯದ ಪರಾಕಾಷ್ಠೆ ಎಂದು ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜೂನ್ 15ರೊಳಗೆ ಬಾಕಿ ಉಳಿದಿರುವ ಎಲ್ಲಾ ಪೈಪ್ಲೈನ್ ಕಾಮಗಾರಿಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು. ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು, ಸಹಾಯಕ ಇಂಜಿನಿಯರರು ಮತ್ತು ಕಿರಿಯ ಇಂಜಿನಿಯರರು ಸ್ಥಳಮಟ್ಟದಲ್ಲಿ ನಿರಂತರ ಅನುಸರಣೆ ನಡೆಸಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.

ಹೈಡ್ರೋ ಟೆಸ್ಟಿಂಗ್ಗೆ ವೇಗ

ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಲ್ಲಿ ಹೈಡ್ರೋ ಟೆಸ್ಟಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಕಾರ್ಮಿಕರ ತಂಡಗಳನ್ನು ಹೆಚ್ಚಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು. ಕನಿಷ್ಠ ಶೇ.70ರಷ್ಟು ಗುರಿ ಸಾಧನೆಗೆ ಒತ್ತು ನೀಡುವಂತೆ ಸೂಚಿಸಿದರು.

ಹೆದ್ದಾರಿ, ರೈಲ್ವೆ ಮತ್ತು ಅರಣ್ಯ ಅನುಮತಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮ

ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಲೈನ್ ಕ್ರಾಸಿಂಗ್ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಾಕಿ ಅನುಮತಿಗಳಿಂದ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಇಒ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಅನುಮತಿಗಳನ್ನು ಪಡೆದು ಕಾಮಗಾರಿ ಮುಂದುವರಿಸುವಂತೆ ಸೂಚಿಸಿದರು.

ಒಎಚ್ಟಿ ಗುಣಮಟ್ಟ ಪರಿಶೀಲನೆಗೆ ಒತ್ತು

ಬಸವನಬಾಗೇವಾಡಿ ಹಾಗೂ ಇಂಡಿ ತಾಲೂಕುಗಳಲ್ಲಿ ಮೇಲ್ಮಟ್ಟದ ನೀರು ಸಂಗ್ರಹಗಾರಗಳ ಎನ್ಡಿಟಿ ಪರೀಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಪತ್ತೆಯಾಗಿರುವ ಹಿನ್ನೆಲೆ, ಅಗತ್ಯವಿರುವ ಗ್ರಾಮಗಳಲ್ಲಿ ಹೊಸ ಒಎಚ್ಟಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಇತರೆ ತಾಲೂಕುಗಳಲ್ಲಿಯೂ ಅಗತ್ಯವಿದ್ದರೆ ತಕ್ಷಣ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.

ಭೂಮಿ ಸಮಸ್ಯೆಗೆ ಖಾಸಗಿ ಜಾಗ ಖರೀದಿ ಮಾರ್ಗ

ಒಎಚ್ಟಿ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂಮಿಯನ್ನು ಸೂಕ್ತ ದರದಲ್ಲಿ ಖರೀದಿಸಲು ಸ್ಥಳೀಯ ಅಧಿಕಾರಿಗಳು ಭೂಮಾಲೀಕರೊಂದಿಗೆ ಸಮನ್ವಯ ಸಾಧಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.

“ಹರ್ ಘರ್ ಜಲ್” ಪ್ರಗತಿ ನಿಧಾನ; ತುರ್ತು ಕ್ರಮಕ್ಕೆ ಸೂಚನೆ

ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ “ಹರ್ ಘರ್ ಜಲ್” ಪ್ರಗತಿ ಅತ್ಯಂತ ನಿಧಾನವಾಗಿದೆ ಎಂದು ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ಗೆ ಐದು ಗ್ರಾಮಗಳನ್ನು “ಹರ್ ಘರ್ ಜಲ್” ಘೋಷಣೆ ಮಾಡುವ ಗುರಿ ನೀಡಲಾಯಿತು.

ಮುಂದಿನ ಸೋಮವಾರವಾದ ಮೇ 18ರೊಳಗೆ ಕನಿಷ್ಠ 100 ಗ್ರಾಮಗಳನ್ನು “ಹರ್ ಘರ್ ಜಲ್” ಯೋಜನೆಯಡಿ ಘೋಷಿಸಬೇಕೆಂದು ಗಡುವು ನೀಡಿದರು. ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ

ಜಿಲ್ಲೆಯ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂದು ಸಿಇಒ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆಗಳು ನಿರಂತರ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನೀರು ಸರಬರಾಜು ಮಾಡುವ ಮೊದಲು ಕ್ಷೇತ್ರ ಪರೀಕ್ಷಾ ಕಿಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಲಾಯಿತು.

ಟಾಸ್ಕ್ ಫೋರ್ಸ್ ಸಭೆಗಳಿಗೆ ಸೂಚನೆ

ತಾಲೂಕು ಹಂತದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಿ ಕುಡಿಯುವ ನೀರಿನ ನಿರ್ವಹಣೆ, ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು, ಸಹಾಯಕ ಇಂಜಿನಿಯರರು ಹಾಗೂ ಕಿರಿಯ ಇಂಜಿನಿಯರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande