
ಮೈಸೂರು, 14 ಮೇ (ಹಿ.ಸ.) :
ಆ್ಯಂಕರ್ : ಪ್ರಾಥಮಿಕ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಸೇರಿದಂತೆ ಈಗಾಗಲೇ ಪರಂಪರೆಯಿಂದ ಅನುಸರಿಸುತ್ತಿರುವ ಧಾರ್ಮಿಕ ಸಂಕೇತಗಳನ್ನು ಧರಿಸಲು ಅವಕಾಶ ಇದೆ. ಆದರೆ ಹೊಸದಾಗಿ ಯಾವುದೇ ಧಾರ್ಮಿಕ ಆಚರಣೆಗಳನ್ನು ಶಾಲೆಗಳಲ್ಲಿ ಆರಂಭಿಸುವಂತಿಲ್ಲ” ಎಂದು ಸ್ಪಷ್ಟಪಡಿಸಿದರು.
ಧಾರ್ಮಿಕ ಸಂಕೇತಗಳ ವಿಚಾರವಾಗಿ ಬಿಜೆಪಿ ವ್ಯಕ್ತಪಡಿಸಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಪರಂಪರೆಯಿಂದ ನಡೆದುಕೊಂಡು ಬಂದಿರುವ ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿಯ ಕ್ರಮ ತಾತ್ಕಾಲಿಕ
ಪ್ರಧಾನಿ ನರೇಂದ್ರ ಮೋದಿ ಅವರು ಡೀಸಲ್ ಬಳಕೆ ಕಡಿತಗೊಳಿಸುವ ಉದ್ದೇಶದಿಂದ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಇಳಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಇದು ಕೇವಲ ತಾತ್ಕಾಲಿಕ ಕ್ರಮ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇತರ ರಾಷ್ಟ್ರಗಳೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು” ಎಂದು ಅಭಿಪ್ರಾಯಪಟ್ಟರು.
ಸಂಪುಟ ಪುನರ್ರಚನೆ ಸುಳಿವು
ರಾಜ್ಯ ಸಚಿವ ಸಂಪುಟ ಪುನರ್ರಚನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಸಂಪುಟ ಪುನರ್ರಚನೆ ಮಾಡುವ ಉದ್ದೇಶ ಇದೆ” ಎಂದು ತಿಳಿಸಿದರು.
ನೀಟ್ ಪರೀಕ್ಷೆ ನಿರ್ವಹಣೆಯಲ್ಲಿ ಕೇಂದ್ರ ವಿಫಲ
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಸರ್ಕಾರ ಪರೀಕ್ಷೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
“ನೀಟ್ ಪರೀಕ್ಷೆಯ ಅವ್ಯವಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ” ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.