ವಿಜಯಪುರ ಸರಾಫ್ ಬಜಾರ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ
ಉಂಟಾಯಿತು
Blast


ವಿಜಯಪುರ, 14 ಮೇ (ಹಿ.ಸ.) :

ಆಂಕರ್ : ವಿಜಯಪುರ ನಗರದ ಹೃದಯ ಭಾಗವಾಗಿರುವ ಸರಾಫ್ ಬಜಾರ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟವು ಕೆಲಕಾಲ ಭೀತಿಯ ವಾತಾವರಣ ಉಂಟಾಯಿತು. ಶಿರೂರು ಕಾಂಪ್ಲೆಕ್ಸ್ನಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಇಬ್ಬರು ಅಕ್ಕಸಾಲಿಗರು ಗಾಯಗೊಂಡಿದ್ದಾರೆ.

ಪ್ರತಿ ದಿನದಂತೆ ಬೆಳಿಗ್ಗೆ ಅಂಗಡಿಗೆ ಬಂದಿದ್ದ ಅಕ್ಕಸಾಲಿಗರು ಚಿನ್ನ ಕರಗಿಸುವ ಕುಲುಮೆ ಕಾರ್ಯ ಆರಂಭಿಸುತ್ತಿದ್ದ ವೇಳೆ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಂಗಡಿಯ ಶಟರ್ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಭಾರೀ ಸದ್ದು ಸುತ್ತಮುತ್ತಲಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು. ಕೆಲಕಾಲ ಸರಾಫ್ ಬಜಾರ್ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಬಂಗಾಳಿ ಮೂಲದ ಬೀಜು (38) ಹಾಗೂ ನಾನಾ ಹಕ್ಕಿಂ (40) ಎಂಬ ಇಬ್ಬರು ಅಕ್ಕಸಾಲಿಗರಿಗೆ ಸುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ತಕ್ಷಣ ಗಾಯಾಳುಗಳನ್ನು ಆಟೋ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಸ್ಫೋಟದ ಭಾರೀ ಸದ್ದು ಕೇಳಿ ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸುರಕ್ಷತಾ ಕ್ರಮಗಳ ಕುರಿತು ಸೂಚನೆ ನೀಡಿದರು.

ಇದೇ ವೇಳೆ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹಾಗೂ ಗಾಂಧಿಚೌಕ ಸಿಪಿಐ ಪ್ರದೀಪ್ ತಳಕೇರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಭದ್ರತಾ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಪ್ರಾಥಮಿಕ ಮಾಹಿತಿ ಪ್ರಕಾರ ಕುಲುಮೆ ಕಾರ್ಯಕ್ಕೆ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ನಲ್ಲಿನ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ಹಾಗೂ ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಾರ್ವಜನಿಕರಿಗೆ ಸಮಾಧಾನ ತಂದಿದ್ದರೂ, ನಗರದ ವ್ಯಾಪಾರಿಕ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಮತ್ತೊಮ್ಮೆ ಮನವರಿಕೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande