
ಬೆಂಗಳೂರು, 14 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ನಕಲಿ ಹಾಗೂ ಗುಣಮಟ್ಟವಿಲ್ಲದ ಔಷಧಗಳ ಹರಿವು ತಡೆಯಲು ಮತ್ತು ಮಾದಕ ವಸ್ತುಗಳ ನಿಯಂತ್ರಣ ಔಷಧಗಳ ದುರುಪಯೋಗ ನಿಯಂತ್ರಿಸಲು ದೇಶದಲ್ಲೇ ಮೊದಲ ಬಾರಿಗೆ ತಂತ್ರಜ್ಞಾನ ಆಧಾರಿತ ನೂತನ ಕಣ್ಗಾವಲು ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರು ಆರೋಗ್ಯಸೌಧದಲ್ಲಿ ನೂತನ ಪೋರ್ಟಲ್ಗೆ ಚಾಲನೆ ನೀಡಿ ಮಾತನಾಡಿದ ಅವರು, NSQ ಔಷಧಗಳನ್ನು ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ಸಹಾಯಕವಾಗಲಿದೆ ಎಂದು ಹೇಳಿದರು.
ಗುಣಮಟ್ಟವಿಲ್ಲದ ಔಷಧಗಳು ಮಾರುಕಟ್ಟೆಗೆ ಬಂದರೆ ಅದನ್ನು ತಕ್ಷಣ ಗುರುತಿಸಿ ಹಿಂಪಡೆಯಲು ಈ ಪೋರ್ಟಲ್ ಮೂಲಕ ಸಾಧ್ಯವಾಗಲಿದೆ. “ಈ ಹಿಂದೆ ಮಾಹಿತಿ ತಲುಪಲು ಸಮಯ ಹಿಡಿಯುತ್ತಿತ್ತು, ಈಗ ರಿಯಲ್-ಟೈಮ್ನಲ್ಲಿ ಎಲ್ಲ ಹೋಲ್ಸೆಲ್ ವ್ಯಾಪಾರಿಗಳಿಗೆ ಮಾಹಿತಿ ತಲುಪುತ್ತದೆ” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸುಮಾರು 15 ಸಾವಿರ ಹೋಲ್ಸೆಲ್ ವ್ಯಾಪಾರಿಗಳು ಈ ವ್ಯವಸ್ಥೆಯಲ್ಲಿ ನೋಂದಾಯಿತರಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಹಿಂದೆ ಕಳಪೆ ಔಷಧಗಳನ್ನು ಪತ್ತೆಹಚ್ಚಿ ಸುಮಾರು ₹1.83 ಕೋಟಿ ಮೌಲ್ಯದ ಔಷಧಗಳನ್ನು ಹಿಂಪಡೆಯಲಾಗಿದೆ ಎಂದು ಅವರು ಉದಾಹರಣೆಯಾಗಿ ಹೇಳಿದರು.
ಮಾದಕ ವಸ್ತುಗಳ ನಿಯಂತ್ರಣ, ಔಷಧಗಳ ಮಾರಾಟಕ್ಕೂ ಈ ಪೋರ್ಟಲ್ ಮೂಲಕ ಕಠಿಣ ನಿಗಾ ಇಡಲಾಗುತ್ತದೆ. ಪ್ರತಿಯೊಂದು ಮಾರಾಟದ ದಾಖಲೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದ್ದು, ನಿಯಮ ಉಲ್ಲಂಘನೆ ಕಂಡುಬಂದರೆ ತಕ್ಷಣ ಪರಿಶೀಲನೆ ಸಾಧ್ಯವಾಗಲಿದೆ.
ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಆಯುಕ್ತ ಶ್ರೀನಿವಾಸ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.