
ಬೆಂಗಳೂರು, 14 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಚುನಾವಣೆಗೆ ಮೊದಲು ಭರವಸೆಗಳ ಸುರಿಮಳೆ ಸುರಿಸಿದ್ದ ಕಾಂಗ್ರೆಸ್, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳಾ ಕಾರ್ಯಕರ್ತೆಯರ ಶ್ರಮವನ್ನು ಅವಮಾನಿಸುತ್ತಿದೆ ಎಂದು ಟೀಕಿಸಿದ್ದಾರೆ.
“ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಪಕ್ಷದ ಅತೃಪ್ತ ನಾಯಕರಿಗೆ ಗಂಜಿ ಕೇಂದ್ರಗಳನ್ನು ತೆರೆಯಲು ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ, ಮನೆ ಮನೆಗೆ ತೆರಳಿ ಜನಸೇವೆ ಮಾಡುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಹಣವಿಲ್ಲ ಎನ್ನುವುದು ವಿಪರ್ಯಾಸ” ಎಂದು ಅಶೋಕ್ ಹೇಳಿದ್ದಾರೆ.
ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಕ್ಷಮಿಸಲಾಗದ ದ್ರೋಹ ಎಂದು ಅವರು ಆರೋಪಿಸಿದ್ದಾರೆ.
ಕೋವಿಡ್ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಜನರ ಆರೋಗ್ಯ ಕಾಪಾಡಲು ಮಹತ್ವದ ಪಾತ್ರ ವಹಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಸೂಕ್ತ ಗೌರವ ಹಾಗೂ ಸೌಲಭ್ಯಗಳನ್ನು ನೀಡಬೇಕು. ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.