
ಬಳ್ಳಾರಿ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲು ಕರ್ನಾಟಕ ರಾಜ್ಯ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್. ಶಶಿಕುಮಾರ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ, ಈ ಹಿಂದೆ ಅಲ್ಲಿ ಅಪ್ಪಣ್ಣ ಅವರ ಪುತ್ಥಳಿ ಇತ್ತು. ಅದನ್ನು, ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಹಸ್ತಕ್ಷೇಪ ಮಾಡಿ ಶಿವಶರಣ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ತೆರವುಗೊಳಿಸಿ, ಬೇರೆ ಶರಣರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಖಂಡನೀಯ ಎಂದರು.
ಹಡಪದ ಅಪ್ಪಣ್ಣ ಅವರು ವಿಶ್ವಗುರು, ಸಾಂಸ್ಕøತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಕಾರಣ
ಅಪ್ಪಣ್ಣನವರ ಮೂರ್ತಿಯನ್ನು ಅರಿವಿನ ಗವಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಯೇ, ಅಪ್ಪಣ್ಣ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಬೇಕು ಎಂದು ಅವರು ಆಗ್ರಹಿಸಿದರು.
ಬಳ್ಳಾರಿ ಜಿಲ್ಲಾ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಚ್. ರುದ್ರಪ್ಪ , ಜಿಲ್ಲಾ ಸಂಚಾಲಕ ಎಚ್. ಅಮರೇಶ್, ತಾಲೂಕ ಅಧ್ಯಕ್ಷ ಎಚ್. ಶಿವರಾಜ್ ಜಿಲ್ಲಾ ಪ್ರತಿನಿಧಿ ಎಚ್. ಸದಾಶಿವ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್