ಈಶ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಪೂರ್ಣಗೊಳಿಸಿದ 99 ರಕ್ಷಣಾ ಸಿಬ್ಬಂದಿ
ಬೆಂಗಳೂರು, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತೀಯ ರಕ್ಷಣಾ ಪಡೆಗಳಿಗಾಗಿ ಸದ್ಗುರು ಗುರುಕುಲಂ ಹಮ್ಮಿಕೊಂಡಿದ್ದ 15 ದಿನಗಳ ಶಾಸ್ತ್ರೀಯ ಹಠ ಯೋಗದ “ಟ್ರೈನ್ ದಿ ಟ್ರೈನರ್” ಕಾರ್ಯಕ್ರಮವು ಇಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮುಕ್ತಾಯಗೊಂಡಿತು. ಈ ತಂಡದಲ್ಲಿ ಭಾರತೀಯ ನೌಕಾಸೇನೆಯ 78 ಮತ್ತು
ಈಶ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಪೂರ್ಣಗೊಳಿಸಿದ 99 ರಕ್ಷಣಾ ಸಿಬ್ಬಂದಿ


ಬೆಂಗಳೂರು, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತೀಯ ರಕ್ಷಣಾ ಪಡೆಗಳಿಗಾಗಿ ಸದ್ಗುರು ಗುರುಕುಲಂ ಹಮ್ಮಿಕೊಂಡಿದ್ದ 15 ದಿನಗಳ ಶಾಸ್ತ್ರೀಯ ಹಠ ಯೋಗದ “ಟ್ರೈನ್ ದಿ ಟ್ರೈನರ್” ಕಾರ್ಯಕ್ರಮವು ಇಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮುಕ್ತಾಯಗೊಂಡಿತು. ಈ ತಂಡದಲ್ಲಿ ಭಾರತೀಯ ನೌಕಾಸೇನೆಯ 78 ಮತ್ತು ಭಾರತೀಯ ಸೈನ್ಯದ 21 ಸಿಬ್ಬಂದಿಗಳು ಸೇರಿದಂತೆ ಒಟ್ಟು 99 ರಕ್ಷಣಾ ಸಿಬ್ಬಂದಿಗಳಿದ್ದರು. ಇವರು ತೀವ್ರತರವಾದ ತರಬೇತಿಯನ್ನು ಪೂರ್ಣಗೊಳಿಸಿದ್ದು, ಈ ಅಭ್ಯಾಸಗಳನ್ನು ತಮ್ಮ ತಮ್ಮ ರಕ್ಷಣಾ ಕೇಂದ್ರಗಳಲ್ಲಿನ ಸಹೋದ್ಯೋಗಿಗಳಿಗೆ ಕಲಿಸಲು ಸಜ್ಜಾಗಿದ್ದಾರೆ.

ಮಾರ್ಚ್ 23ರಿಂದ ಏಪ್ರಿಲ್ 6ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಪ ಯೋಗ, ಸೂರ್ಯ ಕ್ರಿಯಾ, ಅಂಗಮರ್ದನ ಹಾಗೂ ಆನ್‌ಲೈನ್ ಇನ್ನರ್ ಇಂಜಿನಿಯರಿಂಗ್ ಮುಂತಾದ ಶಾಸ್ತ್ರೀಯ ಯೋಗ ಅಭ್ಯಾಸಗಳಲ್ಲಿ ತೀವ್ರತರವಾದ ತರಬೇತಿ ನೀಡಲಾಯಿತು. ವೈಯಕ್ತಿಕ ರೂಪಾಂತರಣೆ, ಆಂತರಿಕ ಸಮತೋಲನ ಮತ್ತು ಈ ಸಾಧನಗಳನ್ನು ರಕ್ಷಣಾ ಪಡೆಗಳಲ್ಲಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ವಿಶೇಷ ಒತ್ತು ನೀಡಲಾಗಿತ್ತು. ದೇಶದ ರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿರುವ ರಕ್ಷಣಾ ಸಿಬ್ಬಂದಿಗೆ ಶಾಸ್ತ್ರೀಯ ಹಠಯೋಗದ ಪ್ರಾಚೀನ ವಿಜ್ಞಾನವನ್ನು ತಲುಪಿಸುವ ಸದ್ಗುರುಗಳ ದೃಷ್ಟಿಕೋನವನ್ನು ಈ ಉಪಕ್ರಮವು ವ್ಯಕ್ತಪಡಿಸುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳು, ಈ ತರಬೇತಿಯಿಂದ ಯೋಗವನ್ನು ಶಕ್ತಿಶಾಲಿ ಆಂತರಿಕ ತಂತ್ರಜ್ಞಾನವಾಗಿ ಅನುಭವಿಸಲು ಸಾಧ್ಯವಾಯಿತು ಎಂದು ಹೇಳಿದರು. ಇದು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನವನ್ನು ಉತ್ತೇಜಿಸುತ್ತದೆ. ಕಾರ್ಯಕ್ರಮದ ಭಾಗಿಯಾಗಿದ್ದ ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಶ್ರೀಕಾಂತ್ ಜೋಶಿ ಅವರು, “ಈ ಹಠಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮವು ಮೂರು ಮುಖ್ಯ ಪ್ರಯೋಜನಗಳನ್ನು ನೀಡುತ್ತದೆ: ದೈಹಿಕ ಸ್ಥೈರ್ಯ, ಮಾನಸಿಕ ಶಾಂತಿ ಮತ್ತು ಆಂತರಿಕ ಅನ್ವೇಷಣೆ. ಈ ಆಂತರಿಕ ನಿಶ್ಚಲತೆಯನ್ನು ಬೆಳೆಸುವುದರಿಂದ ಜನರು ಪರಿಸ್ಥಿತಿಯ ಅರಿವನ್ನು ಹೆಚ್ಚಿಸಿಕೊಳ್ಳುತ್ತಾರೆ, ಒತ್ತಡದ ಸಂದರ್ಭಗಳಲ್ಲಿ ಸಮಸ್ಥಿತಿಯಲ್ಲಿ ಇರುತ್ತಾರೆ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹೆಚ್ಚು ಸಿದ್ಧರಾಗಿರುತ್ತಾರೆ,” ಎಂದು ಹೇಳಿದರು. ಈ ತರಬೇತಿ ತಮ್ಮ ಘಟಕಗಳಲ್ಲಿರುವ ಇನ್ನಷ್ಟು ಸಿಬ್ಬಂದಿಗೆ ಈ ಅಭ್ಯಾಸಗಳನ್ನು ಹಂಚಿಕೊಳ್ಳಲು ಸಹಾಯ ಮಾಡಿದೆ ಮತ್ತು ಇದರಿಂದ ರಕ್ಷಣಾ ಕ್ಷೇತ್ರದಲ್ಲಿರುವವರಲ್ಲಿ ವ್ಯಾಪಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರ ಅನುಭವವನ್ನು ಹಂಚಿಕೊಂಡರು.

ಕಮಾಂಡರ್ ರಾಹುಲ್ ಜೈಸ್ವಾಲ್ ಅವರು, ಈ ಕಾರ್ಯಕ್ರಮವು ಯೋಗದ ಬಗ್ಗೆ ತಮ್ಮ ತಿಳುವಳಿಕೆಯನ್ನು ಸಂಪೂರ್ಣವಾಗಿ ಬದಲಿಸಿದೆ ಎಂದು ಹೇಳಿದರು.

“ಯೋಗದ ನಿಜವಾದ ಅರ್ಥ ತುಂಬಾ ವಿಭಿನ್ನವಾಗಿದೆ. ಅದು ಆಂತರ್ಯವನ್ನು ನೋಡುವುದು. ನಾವು ಆಳವಾಗಿ ಅರಿತುಕೊಳ್ಳಬೇಕಾದದ್ದು ಇನ್ನರ್ ಇಂಜಿನಿಯರಿಂಗ್,” ಎಂದು ಅವರು ಹೇಳಿದರು. ಈ ತರಬೇತಿಯು ಸಿಬ್ಬಂದಿಗೆ “ನಮ್ಮನ್ನೇ ಉತ್ತಮವಾಗಿ ಅರ್ಥಮಾಡಿಕೊಳ್ಳಲು” ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಲೆಫ್ಟಿನೆಂಟ್ ಅಂಜಲಿ ಗೋಯಲ್ ಅವರು, ಈ ಕಾರ್ಯಕ್ರಮವು ಮನಸ್ಸು ಮತ್ತು ದೇಹ ಎರಡರ ಮೇಲೂ ಸ್ಪಷ್ಟ ಪರಿಣಾಮ ಬೀರಿದೆ ಎಂದು ಹೇಳಿದರು.

“ಮಾನಸಿಕವಾಗಿ ನಾನು ತುಂಬಾ ಶಾಂತಿಯುತವಾಗಿದ್ದೇನೆ... ದೈಹಿಕವಾಗಿ ಈಗ ನಾನು ಹೆಚ್ಚು ನಮ್ಯತೆಯನು ಕಾಣುತ್ತಿದ್ದೇನೆ,” ಎಂದು ಅವರು ಹೇಳಿದರು. ಯೋಗದ ಬಗ್ಗೆ ತಮ್ಮ ಅರಿವು ಕೇವಲ ಆಸನಗಳಷ್ಟೇ ಅಲ್ಲ,“ನಿಮ್ಮ ಆಂತರಿಕ ಶಾಂತಿ” ಮತ್ತು “ನಿಮ್ಮೊಂದಿಗೆ ಇರುವ ಸಂಪರ್ಕ” ಎಂಬುದರ ಕಡೆಗೆ ಬದಲಾಗಿದೆ ಎಂದು ಅವರು ಮುಂದುವರಿಸಿದರು.

ಯೋಗ ತರಬೇತಿ ಸೆಷನ್‌ಗಳಲ್ಲಿ ಭಾಗವಹಿಸುವದರ ಜೊತೆಗೆ ರಕ್ಷಣಾ ಸಿಬ್ಬಂದಿಯವರು ಈಶ ಹೋಮ್ ಸ್ಕೂಲ್‌ಗೆ ಭೇಟಿ ನೀಡಿದರು ಮತ್ತು ಈಶ ಯೋಗ ಕೇಂದ್ರದಲ್ಲಿರುವ ಪ್ರಾಣಪ್ರತಿಷ್ಠಿತ ಧ್ಯಾನಲಿಂಗ, ಲಿಂಗ ಭೈರವಿ ಮತ್ತು ತೀರ್ಥಕುಂಡಗಳ ಸಾನ್ನಿಧ್ಯವನ್ನು ಅನುಭವಿಸಿದರು. ಕೃತಜ್ಞತೆಯ ಸಂಕೇತವಾಗಿ ಯೋಗ ಕೇಂದ್ರದಲ್ಲಿರುವ ಸಾಧಕರಿಗೆ ಭಿಕ್ಷಾ ಮಂಟಪದಲ್ಲಿ ಆಹಾರವನ್ನು ಬಡಿಸುವ ಮೂಲಕ ಪವಿತ್ರ ಅನ್ನದಾನವನ್ನು ಅರ್ಪಿಸಿದರು.

www.instagram.com/reels/DWqwaMDkUn5/

ಕಾರ್ಯಕ್ರಮದ ವೇಳೆ ತಮ್ಮ ಅತ್ಯಂತ ಸ್ಮರಣೀಯ ಅನುಭವವನ್ನು ಹಂಚಿಕೊಂಡ ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಜೋಶಿ ಅವರು ಹೇಳಿದರು: “ನಾವು ಇಲ್ಲಿದ್ದ ಅವಧಿಯಲ್ಲಿ ನಮಗೆ ದೊರಕಿದ ಎಲ್ಲ ಕಾಳಜಿಗೆ ಕೃತಜ್ಞತೆಯ ಸೂಚಕವಾಗಿ ಈಶ ಯೋಗ ಕೇಂದ್ರಕ್ಕೆ ಏನಾದರೂ ಹಿಂತಿರುಗಿ ನೀಡುವ ಅದ್ಭುತ ಅವಕಾಶ ನಮಗೆ ದೊರೆಯಿತು. ಭಿಕ್ಷಾ ಮಂಟಪದಲ್ಲಿ ಅನ್ನದಾನವನ್ನು ಅರ್ಪಿಸುವುದು ಹಾಗೂ ಇತರರಿಗೆ ಸೇವೆ ಸಲ್ಲಿಸುವುದು ತುಂಬಾ ತೃಪ್ತಿಕರವಾಗಿತ್ತು. ಈ ಸೇವೆಯ ಮೂಲಕ ನಾವು ಅನುಭವಿಸಿದ ಸಂತೋಷ ಮತ್ತು ಬಾಂಧವ್ಯವು ನಿಜವಾಗಿಯೂ ವರ್ಣಿಸಲು ಅಸಾಧ್ಯವಾಗಿದೆ.”

ಇದುವರೆಗೆ ಈ ಕಾರ್ಯಕ್ರಮವನ್ನು ರಕ್ಷಣಾ ಸಿಬ್ಬಂದಿಯ 700ಕ್ಕೂ ಹೆಚ್ಚು ಜನರಿಗೆ ಅರ್ಪಿಸಲಾಗಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸುವವರ ಯೋಗಕ್ಷೇಮ ಮತ್ತು ಆಂತರಿಕ ಶಕ್ತಿಗೆ ಪೂರಕವಾದ ಪ್ರಯತ್ನವನ್ನು ಸೂಚಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande