


ಬಳ್ಳಾರಿ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹರಡುವುದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಮನೆ-ಮನೆ ಭೇಟಿ, ಲಾರ್ವಾ ಸಮೀಕ್ಷೆ ಮತ್ತು ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ತಿಳಿಸಿದ್ದಾರೆ.
ಡೆಂಗ್ಯೂ ಎಂಬುದು ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಹರಡುವ ವೈರಲ್ ಸೋಂಕು. ಸೊಳ್ಳೆ ಕಚ್ಚಿದ 4 ರಿಂದ 10 ದಿನಗಳಲ್ಲಿ ಹಠಾತ್ ತೀವ್ರ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಸ್ನಾಯು, ಮೂಳೆ, ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಮತ್ತು ಚರ್ಮದ ಮೇಲೆ ಕೆಂಪು ದದ್ದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ತೀವ್ರ ಹೊಟ್ಟೆ ನೋವು, ಮೂಗಿನಿಂದ ರಕ್ತಸ್ರಾವ ಹಾಗೂ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಹಠಾತ್ ಇಳಿಕೆಯಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾದ ಕ್ರಮಗಳು :
ಮನೆ-ಮನೆ ಭೇಟಿ : ಆಶಾ ಕಾರ್ಯಕರ್ತೆಯರು ತಿಂಗಳಿಗೆ ಎರಡು ಬಾರಿ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಸಂಗ್ರಹಿಸಿಟ್ಟ ನೀರಿನ ಪರಿಕರಗಳಲ್ಲಿ ಲಾರ್ವಾ (ಸೊಳ್ಳೆ ಮೊಟ್ಟೆ) ಇದೆಯೇ ಎಂದು ಪರೀಕ್ಷಿಸುತ್ತಿದ್ದಾರೆ.
ವಿಶೇಷ ಲಾರ್ವಾ ಸಮೀಕ್ಷೆ : ಬಳ್ಳಾರಿ ನಗರ, ಸಿರುಗುಪ್ಪ ಮತ್ತು ಸಂಡೂರು ನಗರ ಪ್ರದೇಶಗಳಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರದಂದು ವಿಶೇಷ ಸಮೀಕ್ಷೆ ನಡೆಸಿ ಲಾರ್ವಾ ತಾಣಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ.
ವೈರಾಣು ಪತ್ತೆ : ಜಿಲ್ಲೆಯ 70 ಪ್ರದೇಶಗಳಿಂದ ಸೊಳ್ಳೆಗಳನ್ನು ಸಂಗ್ರಹಿಸಿ ಬೆಂಗಳೂರಿನ ಎನ್ಐವಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 7 ಪ್ರದೇಶಗಳಲ್ಲಿ ಡೆಂಗ್ಯೂ ವೈರಾಣು ಪತ್ತೆಯಾಗಿದ್ದು, ಅಂತಹ ಕಡೆಗಳಲ್ಲಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.
ರಾಸಾಯನಿಕ ಸಿಂಪಡಣೆ : ಸೊಳ್ಳೆಗಳ ನಿಯಂತ್ರಣಕ್ಕಾಗಿ ಬಿಟಿಐ ಮತ್ತು ಥೆಮಿಫಾಸ್ ದ್ರಾವಣಗಳನ್ನು ಸಿಂಪಡಿಸಲಾಗುತ್ತಿದೆ. ತುರ್ತು ಪರಿಸ್ಥಿತಿ ಇರುವ ಕಡೆಗಳಲ್ಲಿ ಒಳಾಂಗಣ ಧೂಮೀಕರಣ ಮಾಡಲಾಗುತ್ತಿದೆ.
ಸಾರ್ವಜನಿಕರಿಗೆ ಮನವಿ :
ಡೆಂಗ್ಯೂ ನಿಯಂತ್ರಣ ಕೇವಲ ಸರ್ಕಾರದ ಕೆಲಸವಲ್ಲ, ಇದರಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆಗಳನ್ನು ಬಳಸಬೇಕು ಹಾಗೂ ಮೈ ಪೂರ್ಣ ಮುಚ್ಚುವ ಬಟ್ಟೆಗಳನ್ನು ಧರಿಸಬೇಕು.
ಸಾರ್ವಜನಿಕರು ಯಾವುದೇ ಜ್ವರ ಬಂದರೂ ನಿರ್ಲಕ್ಷಿಸದೇ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಪ್ಯಾರಸಿಟಮಾಲ್ ಮಾತ್ರ ಬಳಸಬೇಕು, ಸ್ವಯಂ ಚಿಕಿತ್ಸೆ ಅಪಾಯಕಾರಿ ಎಂದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್