
ಬೆಂಗಳೂರು, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳಾ ಮೀಸಲಾತಿ ಕುರಿತಾಗಿ ಕಾಂಗ್ರೆಸ್ ನೇತೃತ್ವದ ‘ಇಂಡಿ’ ಒಕ್ಕೂಟದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ನಾರಿ ಶಕ್ತಿ ವಂದನಾ ಕಾಯ್ದೆ’ಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ದೇಶದ ಕೋಟ್ಯಂತರ ಮಹಿಳೆಯರ ರಾಜಕೀಯ ಹಕ್ಕು ಹಾಗೂ ಶಾಸಕಾಂಗದಲ್ಲಿ ಪ್ರಾತಿನಿಧ್ಯದ ಅವಕಾಶವನ್ನು ಹತ್ತಿಕ್ಕಿವೆ ಎಂದು ಅವರು ಆರೋಪಿಸಿದ್ದಾರೆ.
ಭಾರತದ ಮಹಿಳೆಯರ ಹಕ್ಕು, ಗೌರವ ಮತ್ತು ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ನಾರಿ ಶಕ್ತಿ ವಂದನಾ ಅಧಿನಿಯಮ ಅನ್ನು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಪ್ರತಿ ಪಕ್ಷಗಳು ಸೋಲಿಸಲು ಯತ್ನಿಸುತ್ತಿವೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
“ಇದು ಕೇವಲ ಒಂದು ಮಸೂದೆಯ ವಿರೋಧವಲ್ಲ. ಬದಲಿಗೆ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ, ಅವರ ಪ್ರಾತಿನಿಧ್ಯಕ್ಕೆ ತಡೆಯೊಡ್ಡುವ ಅಕ್ಷಮ್ಯ ಅಪರಾಧವಾಗಿದೆ” ಎಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರಿಂದಲೇ ತಕ್ಕ ಪಾಠ ಕಲಿಯಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರಿಗೆ ಗೌರವ, ಸಮಾನ ಅವಕಾಶ ಮತ್ತು ರಾಜಕೀಯ ಹಕ್ಕು ನೀಡುವ ನಿಟ್ಟಿನಲ್ಲಿ ಬಿಜೆಪಿ ತನ್ನ ಹೋರಾಟವನ್ನು ಮುಂದುವರಿಸಲಿದೆ. ಸ್ತ್ರೀ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಾಧಿಸುವವರೆಗೆ ಪಕ್ಷದ ಹೋರಾಟ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹಿಳಾ ಸಬಲೀಕರಣದ ಸಂಕಲ್ಪಕ್ಕೆ ಕರ್ನಾಟಕದ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರ ಹಕ್ಕಿಗೆ ತಡೆಯೊಡ್ಡಿದ ವಿರೋಧ ಪಕ್ಷಗಳ ನಿಲುವನ್ನು ಜನತೆ ಮರೆಯುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa