ಶಿಶು ಸಾವು ಪ್ರಕರಣ ; ಸರ್ಕಾರದ ವಿರುದ್ಧ ಆರ್. ಅಶೋಕ ವಾಗ್ದಾಳಿ
ಪ್ರತಿ
Ashok


ಬೆಂಗಳೂರು, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಹಾಗೂ ತಾಯಂದಿರ ಸಾವಿನ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತಿ ಪಕ್ಷದ ನಾಯಕ ಆರ್.ಅಶೋಕ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 15 ತಿಂಗಳಲ್ಲಿ ಮೈಸೂರಿನ ಐತಿಹಾಸಿಕ ಚೆಲುವಾಂಬ ಆಸ್ಪತ್ರೆಯಲ್ಲಿ 421 ನವಜಾತ ಶಿಶುಗಳು ಮತ್ತು 12 ತಾಯಂದಿರು ಸಾವನ್ನಪ್ಪಿರುವುದು ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುಸ್ಥಿತಿಗೆ ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿಯೇ ನವಜಾತ ಶಿಶುಗಳು ಸರಣಿಯಾಗಿ ಸಾವನ್ನಪ್ಪುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಟೀಕಿಸಿರುವ ಅವರು, ಆಸ್ಪತ್ರೆಯಲ್ಲಿ ಅಗತ್ಯವಿರುವ ಆರು ತಜ್ಞ ವೈದ್ಯರ ಬದಲು ಕೇವಲ ಒಬ್ಬ ವೈದ್ಯ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಅದೇ ರೀತಿ, ಆಸ್ಪತ್ರೆಯಲ್ಲಿ 96 ನರ್ಸ್ಗಳ ಅವಶ್ಯಕತೆಯಿದ್ದರೂ ಕೇವಲ 59 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಸಿಗೆಗಳ ಕೊರತೆ, ಎಸ್ಎನ್ಸಿಯು ಘಟಕಗಳ ಅಭಾವ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯ ಬಗ್ಗೆ ವೈದ್ಯಾಧಿಕಾರಿಗಳು ಹಲವು ಬಾರಿ ಪತ್ರ ಬರೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

“ಮೈಸೂರಿನಲ್ಲಿ ತಮ್ಮ ಪ್ರತಿಮೆ ತಾವೇ ಉದ್ಘಾಟನೆ ಮಾಡಿಕೊಳ್ಳಲು ಹಾಗೂ ರಸ್ತೆಗಳಿಗೆ ತಮ್ಮ ಹೆಸರನ್ನು ಇಡಿಸಿಕೊಳ್ಳಲು ಸರ್ಕಾರ ಉತ್ಸಾಹ ತೋರಿಸುತ್ತಿದೆ. ಆದರೆ ಬಡ ಕುಟುಂಬಗಳ ಮಹಿಳೆಯರು ಮತ್ತು ನವಜಾತ ಶಿಶುಗಳ ಪ್ರಾಣ ಉಳಿಸುವ ಮೂಲಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಜಾಹೀರಾತುಗಳಲ್ಲಿ ಗ್ಯಾರೆಂಟಿ ಸರ್ಕಾರ, ಬಡವರ ಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ, ವಾಸ್ತವದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ರಾಜ್ಯದ ಉಳಿದ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯೂ ಇದೇ ರೀತಿಯದ್ದಾಗಿರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣ ಆಡಳಿತ ಯಂತ್ರವನ್ನು ಎಚ್ಚರಿಸಿ, ಅಗತ್ಯ ವೈದ್ಯರು, ನರ್ಸ್ಗಳು, ಹಾಸಿಗೆಗಳು ಮತ್ತು ನವಜಾತ ಶಿಶು ಆರೈಕೆ ಘಟಕಗಳನ್ನು ಒದಗಿಸಬೇಕು. ಇಲ್ಲವಾದರೆ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಆಕ್ರೋಶ ಸರ್ಕಾರದ ವಿರುದ್ಧ ತಿರುಗಿಬೀಳಲಿದೆ ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande