
ಬೆಂಗಳೂರು, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡು.ಕೆ.ಶಿವಕುಮಾರ್ ಅವರು ಭಾಗವಹಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು “ಡಾ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ, ಅದು ನಮ್ಮ ಬದುಕಿನ ದಾರಿದೀಪ. ಭಿನ್ನಾಭಿಪ್ರಾಯಗಳಿದ್ದರೂ ಸಹ ಅವರ ಮೇಧಾಶಕ್ತಿಯನ್ನು ಗುರುತಿಸಿ ಸಂವಿಧಾನ ರಚನೆಯ ಜವಾಬ್ದಾರಿ ನೀಡಿದ್ದು ಕಾಂಗ್ರೆಸ್ ಪಕ್ಷದ ವಿಶಾಲ ಮನೋಭಾವಕ್ಕೆ ಸಾಕ್ಷಿ,” ಎಂದು ಹೇಳಿದರು.
ಸಮಾನತೆ ಮತ್ತು ಸಾಮಾಜಿಕ ನ್ಯಾಯವೇ ನೈಜ ಪ್ರಜಾಪ್ರಭುತ್ವದ ಆಶಯವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೇ ನಮ್ಮ ಗುರಿಯಾಗಬೇಕು ಎಂದು ಅವರು ಒತ್ತಿಹೇಳಿದರು. ನೊಂದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಮುಖ್ಯ ಎಂದರು.
“ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರ” ಎಂಬ ಅಂಬೇಡ್ಕರ್ ಅವರ ಮಾತು ನಮಗೆ ಸದಾ ಸ್ಪೂರ್ತಿಯಾಗಿದೆ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತ ನಾಯಕನಲ್ಲ, ದೇಶದ ಪ್ರತಿಯೊಬ್ಬ ಪ್ರಜೆಯ ನಾಯಕ ಎಂದು ಹೇಳಿದರು.
ದೇಶದಾದ್ಯಂತ ಅಂಬೇಡ್ಕರ್ ಅವರ ಪ್ರತಿಮೆಗಳು ಅತ್ಯಧಿಕವಾಗಿ ಕಾಣುತ್ತಿರುವುದನ್ನು ಉಲ್ಲೇಖಿಸಿದ ಅವರು, ಜ್ಞಾನ ಮತ್ತು ಹೋರಾಟದಿಂದ ವ್ಯಕ್ತಿಯೊಬ್ಬನು ಎತ್ತರಕ್ಕೇರುವುದಕ್ಕೆ ಬಾಬಾಸಾಹೇಬರೇ ನಿದರ್ಶನ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa