
ಬೆಂಗಳೂರು, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜಧಾನಿ ಬೆಂಗಳೂರಿನ ಸ್ವಚ್ಛತೆ ಸಮಸ್ಯೆ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಅವರು, “ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಸಿಲಿಕಾನ್ ಸಿಟಿ ದುರ್ಗಂಧದಿಂದ ನರಳುತ್ತಿದೆ. ಆದರೆ ಡಿಸಿಎಂ ಅವರಿಗೆ ಸಿಎಂ ಕುರ್ಚಿ ಹೊರತುಪಡಿಸಿ ಇತರ ಸಮಸ್ಯೆಗಳು ಕಾಣುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಐಟಿ ನಗರ ಬೆಂಗಳೂರು ಇಂದು ಕಸದ ಗುಡ್ಡವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ಅವರು, ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಮುಖ್ಯ ಕಚೇರಿಯಿಂದ ಕೆಲವೇ ಅಂತರದಲ್ಲಿರುವ ರಸ್ತೆಗಳಲ್ಲಿಯೇ 30 ದಿನಕ್ಕೊಮ್ಮೆ ಮಾತ್ರ ಕಸ ವಿಲೇವಾರಿ ನಡೆಯುತ್ತಿರುವುದು ಆಡಳಿತದ ವೈಫಲ್ಯಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.
“ಇದೇನಾ ನಿಮ್ಮ ‘ಬ್ರ್ಯಾಂಡ್ ಬೆಂಗಳೂರು’? ನಿಮ್ಮ ಭರವಸೆಗಳು ಮತ್ತು ಯೋಜನೆಗಳು ಎಲ್ಲಿಗೆ ಹೋದವು? ಜಿಬಿಎ ಸಂಪೂರ್ಣ ನಿಷ್ಕ್ರಿಯವಾಗಿದೆ” ಎಂದು ಡಿಸಿಎಂ ವಿರುದ್ಧ ಪ್ರಶ್ನಿಸಿದ್ದಾರೆ.
ನಗರದಲ್ಲಿ ಜಮಾಯಿಸಿರುವ ಕಸದ ರಾಶಿಗಳು ಕೇವಲ ಸೌಂದರ್ಯ ಹಾನಿಗೆ ಮಾತ್ರ ಕಾರಣವಾಗದೇ, ಬಿರು ಬೇಸಿಗೆಯಲ್ಲಿ ಡೆಂಗ್ಯೂ ಮತ್ತು ವೈರಲ್ ಸೋಂಕುಗಳಂತಹ ರೋಗಗಳ ಹರಡುವಿಕೆಗೆ ಕಾರಣವಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಜನರ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
ಕುರ್ಚಿ ಕಚ್ಚಾಟ ಬಿಟ್ಟು ಮೊದಲು ನಗರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ. ಜಾಹೀರಾತುಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜನತೆ ಆಕ್ರೋಶಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa