ವಿಜಯಪುರದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಪೊಲೀಸ್ ನಿಗಾವಹಿಸಲು ಆಗ್ರಹ
ವಿಜಯಪುರ, 20 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ನಗರದ ಶಾಲೆ ಹಾಗೂ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸುವುದು, ಕಿರುಕುಳ ನೀಡುವುದು ಹಾಗೂ ಅಸಭ್ಯವಾಗಿ ವರ್ತಿಸುವಂತಹ ಘಟನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಳ
ರಾಘವ


ವಿಜಯಪುರ, 20 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ನಗರದ ಶಾಲೆ ಹಾಗೂ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸುವುದು, ಕಿರುಕುಳ ನೀಡುವುದು ಹಾಗೂ ಅಸಭ್ಯವಾಗಿ ವರ್ತಿಸುವಂತಹ ಘಟನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಆಗ್ರಹಿಸಿದೆ.

ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ದರೋಡೆಕೋರರು, ಕಳ್ಳರು, ಸಮಾಜಘಾತಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದು, ಶಬ್ಧ ಮಾಲಿನ್ಯ ಉಂಟು ಮಾಡುವ ವಾಹನಗಳ ಸೈಲೆನ್ಸರ್ಗಳನ್ನು ವಶಪಡಿಸಿಕೊಂಡು ನಾಶಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ನಡೆಸುವವರು ಹಾಗೂ ಮದ್ಯಪಾನ ಮಾಡುವವರ ವಿರುದ್ಧ ಕ್ರಮ ಜರುಗಿಸಿರುವುದು ಸ್ವಾಗತಾರ್ಹ ಎಂದು ಸಂಘಟನೆ ತಿಳಿಸಿದೆ.

ಆದರೆ, ನಗರದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರನ್ನು ಕೆಲವರು ಹಿಂಬಾಲಿಸುವುದು, ಮಾತಿನಿಂದ ಕಿರುಕುಳ ನೀಡುವುದು, ಒತ್ತಾಯ ಪೂರ್ವಕವಾಗಿ ದೂರವಾಣಿ ಸಂಖ್ಯೆ ಕೇಳುವುದು ಹಾಗೂ ಪ್ರತಿದಿನ ಅವರ ಸಂಚಾರ ಸಮಯದಲ್ಲಿ ಕಾಯುತ್ತಾ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ರಾಘವ ಅಣ್ಣಿಗೇರಿ ತಿಳಿಸಿದ್ದಾರೆ.

ಈ ರೀತಿಯ ಕಿರುಕುಳದ ಘಟನೆಗಳು ಹೆಚ್ಚಾಗುತ್ತಿದ್ದರೂ, ಮುಜುಗರ ಹಾಗೂ ಭಯದಿಂದಾಗಿ ಹಲವರು ಪೊಲೀಸ್ ದೂರು ನೀಡಲು ಹಿಂಜರಿಯುತ್ತಿರುವುದು ದುಷ್ಕರ್ಮಿಗಳಿಗೆ ಧೈರ್ಯ ತರುತ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳ ಸುತ್ತಮುತ್ತ ಮುಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಿ, ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಪೊಲೀಸರು ಕೇವಲ ಯೂನಿಫಾರ್ಮ್ನಲ್ಲಿ ಅಥವಾ ಸೈರನ್ ಸಹಿತ ವಾಹನಗಳಲ್ಲಿ ಗಸ್ತು ತಿರುಗುವುದರಿಂದ ಮಾತ್ರ ಸಾಕಾಗುವುದಿಲ್ಲ. ಮುಫ್ತಿಯಲ್ಲಿ ನಿಗಾವಹಿಸಿ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವವರನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ನಡೆಯಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ

ತಿಳಿಸಿದೆ.

ಇನ್ನಷ್ಟು ಪರಿಣಾಮಕಾರಿ ಮುನ್ನೆಚ್ಚರಿಕಾ ಕ್ರಮಗಳಿಂದ ಪೋಷಕರು ಹಾಗೂ ವಿದ್ಯಾರ್ಥಿನಿಯರಲ್ಲಿ ಭದ್ರತಾ ಭಾವನೆ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande