
ವಿಜಯಪುರ, 20 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಲ್ಯದಲ್ಲಿ ಮದ್ದಳೆ ಬಾರಿಸುವವನಾಗಿ, ನಂತರ ಆಧ್ಯಾತ್ಮಿಕ ಜ್ಞಾನದ ಅನ್ವೇಷಣಾಕಾರನಾದ ಅಲ್ಲಮಪ್ರಭುವಿನ ವಚನಗಳು ತತ್ವಜ್ಞಾನ ಮತ್ತು ಅಧ್ಯಾತ್ಮದ ಆಗರವಾಗಿದ್ದು, ಇಂದಿಗೂ ಮಾನವನ ಆಧ್ಯಾತ್ಮಿಕ ಜಾಗೃತಿ ಹಾಗೂ ನೈತಿಕ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಿಕ್ಷಕ-ಸಾಹಿತಿ ಸಂತೋಷ ಬಂಡೆ ಹೇಳಿದರು.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಇಂದು ನಡೆದ ಅಲ್ಲಮಪ್ರಭುಗಳ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಲ್ಲಮಪ್ರಭುವಿನ ವಚನಗಳು ಅನುಭಾವದ ರತ್ನಗಣಿಗಳಾಗಿವೆ. ಬಸವಣ್ಣನವರದು ಭಕ್ತಿ ಮಾರ್ಗವಾಗಿದ್ದರೆ, ಅಲ್ಲಮಪ್ರಭುವಿನದು ಅರಿವಿನ ಮಾರ್ಗವಾಗಿದೆ. ಅನುಭಾವ ಮತ್ತು ಅರಿವಿನ ಮೂಲಕ ಲೋಕ ಕಲ್ಯಾಣದ ಸಂದೇಶ ನೀಡಿದ ಅವರು ಆತ್ಮೋದ್ಧಾರದ ಜೊತೆಗೆ ವ್ಯಕ್ತಿ ಶುದ್ಧಿ ಮೂಲಕ ಸಮಾಜ ಶುದ್ಧಿಗೆ ಒತ್ತು ನೀಡಿದರು. ತನು-ಮನಗಳ ಶುದ್ಧತೆ, ಅಸ್ಪೃಶ್ಯತೆ ನಿವಾರಣೆ, ಸರ್ವ ಸಮಾನತೆ ಹಾಗೂ ಸ್ವಾವಲಂಬಿ ಬದುಕಿಗೆ ಸತ್ಯ ಶದ್ಧ ಕಾಯಕ ಮತ್ತು ದಾಸೋಹ ತತ್ವವನ್ನು ಜಾರಿಗೊಳಿಸಿದರು ಎಂದು ಹೇಳಿದರು.
ಶರಣ ಚಂದ್ರಕಾಂತ ಹುಣಶ್ಯಾಳ ಮಾತನಾಡಿ, ಅಲ್ಲಮಪ್ರಭು ಆಧ್ಯಾತ್ಮ ಜಗತ್ತಿನ ವಿಸ್ಮಯವಾಗಿದ್ದು, ಸಾಧನೆಯ ದೃಷ್ಟಿಯಿಂದ ದೇಶ-ಕಾಲಗಳನ್ನು ಮೀರಿ ವಿಶ್ವದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲ ಬಲ್ಲ ಮಹಾನುಭಾವಿ ಎಂದರು. ಶರಣ ದರ್ಶನದ ಪ್ರಕಾರ ಮನುಷ್ಯ ಸಾಧಿಸಬಹುದಾದ ಆಧ್ಯಾತ್ಮಿಕ ಜಗತ್ತಿನ ಅತ್ಯುನ್ನತ ಮಟ್ಟವನ್ನು ತಲುಪಿದ ಮಹಾತ್ಮ ಅವರು. ಅಲ್ಲಮಪ್ರಭುವನ್ನು ಅರಿಯಲು ಅವರ ವಚನಗಳೇ ಮೂಲ ಆಧಾರ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಚಿಂತಕ ಗಿರೀಶ ಸಾರವಾಡ ಮಾತನಾಡಿ, 12ನೇ ಶತಮಾನದ ವಚನಕಾರರಲ್ಲಿ ಅತ್ಯಂತ ನೇರ, ನಿಷ್ಠುರ ವೈರಾಗ್ಯ ಮೂರ್ತಿಯಾದ ಅಲ್ಲಮಪ್ರಭು ಲೌಕಿಕ ಭೋಗವನ್ನು ತ್ಯಜಿಸಿ ಶಿವಭಕ್ತಿಯ ಮಾರ್ಗವನ್ನು ಬೋಧಿಸಿದರು. ಅವರು ಕೇವಲ ವಚನಕಾರರಲ್ಲ, ಜೀವನ ಮತ್ತು ಸಾಹಿತ್ಯದ ಮೂಲಕ ಜ್ಞಾನದ ಬೆಳಕನ್ನು ಹರಿಸಿದ ಮಹಾ ಪುರುಷರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಮಸಳಿ, ಸುರೇಶ ಕತ್ನಳ್ಳಿ, ಸುಭಾಷ ಬಂಡೆ, ಶ್ರೀಕಾಂತ ಗುಜ್ಜಲವರ, ಚಂದ್ರಕಾಂತ ಕತ್ನಳ್ಳಿ, ಲಕ್ಷ್ಮಣ ಗುಜ್ಜಲವರ, ಅನುಶ್ರೀ, ಶ್ರೀನಿಧಿ, ಭುವನೇಶ್ವರಿ, ಸುರೇಖಾ ಬಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande