ಜಾಗತೀಕರಣ ಯುಗದಲ್ಲಿ ಉದ್ಯೋಗ ಪಡೆಯಲು ಶಿಸ್ತು, ನಿಷ್ಠೆ ಅನಿವಾರ್ಯ: ಶಾಸಕರು
ಗದಗ, 02 ಮಾರ್ಚ್ (ಹಿ.ಸ.) ಆ್ಯಂಕರ್: ಜಾಗತೀಕರಣದ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳ ಪಾತ್ರ ದಿನೇದಿನೇ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಉದ್ಯೋಗ ಪಡೆಯಬೇಕಾದರೆ ಶಿಸ್ತು, ಕೆಲಸದ ಬದ್ಧತೆ, ಕಠಿಣ ಪರಿಶ್ರಮ, ಉದ್ಯೋಗದ ಮೇಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆ ಅತ್ಯ
ಜಾಗತೀಕರಣ ಯುಗದಲ್ಲಿ ಉದ್ಯೋಗ ಪಡೆಯಲು ಶಿಸ್ತು, ನಿಷ್ಠೆ ಅನಿವಾರ್ಯ: ಶಾಸಕರು


ಗದಗ, 02 ಮಾರ್ಚ್ (ಹಿ.ಸ.)

ಆ್ಯಂಕರ್: ಜಾಗತೀಕರಣದ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಕಂಪನಿಗಳ ಪಾತ್ರ ದಿನೇದಿನೇ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಉದ್ಯೋಗ ಪಡೆಯಬೇಕಾದರೆ ಶಿಸ್ತು, ಕೆಲಸದ ಬದ್ಧತೆ, ಕಠಿಣ ಪರಿಶ್ರಮ, ಉದ್ಯೋಗದ ಮೇಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆ ಅತ್ಯಂತ ಅಗತ್ಯವಾಗಿದೆ ಎಂದು ಜಿ.ಎಸ್. ಪಾಟೀಲ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ, ಅಭಿಪ್ರಾಯಪಟ್ಟರು.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿಂದ ಬಿ.ಎಸ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜಿನ ಉದ್ಯೋಗ ಭರವಸೆ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶಗಳ ವತಿಯಿಂದ, ವಿವಿಧ ಎಂಎನ್ಸಿ ಕಂಪನಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಮೇಳಗಳು ಅತ್ಯಂತ ಉಪಯುಕ್ತವಾಗಿವೆ. ಇಂತಹ ಮೇಳಗಳ ಮೂಲಕ ಅಭ್ಯರ್ಥಿಗಳಿಗೆ ಕಂಪನಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಶೇಕಡಾ 60ಕ್ಕೂ ಹೆಚ್ಚು ಮಂದಿ ಉದ್ಯೋಗ ಅರಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಗಜೇಂದ್ರಗಡವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳಗಳು ಉತ್ತಮ ವೇದಿಕೆಯಾಗಲಿದ್ದು, ತಮ್ಮ ಸಾಮರ್ಥ್ಯವನ್ನು ತೋರಿಸಿ ಅವಕಾಶ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ಆರಂಭಿಕ ಸಂಬಳದ ಬಗ್ಗೆ ಹೆಚ್ಚು ಚಿಂತಿಸದೇ, ದೊರೆಯುವ ಉದ್ಯೋಗವನ್ನು ಸ್ವೀಕರಿಸಿ ಅನುಭವ ಸಂಪಾದಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಅನುಭವವೇ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡ ಅಶೋಕ ಭಾಗಮಾರ ಮಾತನಾಡಿ, ಗ್ರಾಮೀಣ ಭಾಗದಲ್ಲೇ ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ಯುವಜನತೆಗೆ ಉಜ್ವಲ ಭವಿಷ್ಯದ ದಾರಿ ತೋರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಗ್ರಾಮೀಣ ಯುವಕರಿಗೂ ನಗರ ಮಟ್ಟದ ಅವಕಾಶಗಳು ದೊರೆಯುತ್ತಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ನಗರ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಮುಖಂಡರಾದ ಅಶೋಕ ಭಾಗಮಾರ, ವಿ.ಬಿ. ಸೋಮನಕಟ್ಟಿಮಠ, ಎಚ್.ಎಸ್. ಸೋಂಪೂರ, ಬಸವರಾಜ ನವಲಗುಂದ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಉಪನ್ಯಾಸಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಭಾಗವಹಿಸಿ, ಅಭ್ಯರ್ಥಿಗಳಿಂದ ಸಂದರ್ಶನ ನಡೆಸಿದವು. ನೂರಾರು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರು ಮೇಳದಲ್ಲಿ ಪಾಲ್ಗೊಂಡು ತಮ್ಮ ಅರ್ಹತೆ, ಕೌಶಲ್ಯದ ಆಧಾರದಲ್ಲಿ ಉದ್ಯೋಗಾವಕಾಶಗಳಿಗಾಗಿ ಪ್ರಯತ್ನಿಸಿದರು. ಉದ್ಯೋಗ ಮೇಳವು ಯುವಜನತೆಯಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಅಭಿಪ್ರಾಯವನ್ನು ಪಾಲ್ಗೊಂಡವರು ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande