ಅಡುಗೆ ಅನಿಲ ಕೊರತೆ:ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
ಗದಗ, 13 ಮಾರ್ಚ್ (ಹಿ.ಸ.) ಆ್ಯಂಕರ್: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ಭವಿಸಿರುವ ಯುದ್ಧದ ಕಾರ್ಮೋಡದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಅಸ್ಥಿರತೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸರಬರಾಜಿನ ಮೇಲೂ ಪರಿಣಾಮ ಬೀಳತೊಡಗಿದೆ. ಇದರ ನೇರ
ಫೋಟೋ


ಗದಗ, 13 ಮಾರ್ಚ್ (ಹಿ.ಸ.)

ಆ್ಯಂಕರ್: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ಭವಿಸಿರುವ ಯುದ್ಧದ ಕಾರ್ಮೋಡದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಅಸ್ಥಿರತೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸರಬರಾಜಿನ ಮೇಲೂ ಪರಿಣಾಮ ಬೀಳತೊಡಗಿದೆ. ಇದರ ನೇರ ಪರಿಣಾಮ ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್ಗಳ ಮೇಲೆ ತಟ್ಟಿದ್ದು, ಪ್ರಯಾಣಿಕರು, ಬಸ್ ಚಾಲಕರು ಹಾಗೂ ನಿರ್ವಾಹಕರು ಉಪಹಾರ ಸಿಗದೆ ಪರದಾಡುವಂತಾಗಿದೆ.

ಗದಗ ನಗರದ ಪ್ರಮುಖ ಸಾರಿಗೆ ಕೇಂದ್ರವಾಗಿರುವ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ದಿನವೂ ನೂರಾರು ಬಸ್ಗಳು ಸಂಚರಿಸುತ್ತಿದ್ದು, ಸಾವಿರಾರು ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಾರೆ. ಪ್ರಯಾಣಿಕರ ಜೊತೆಗೆ ಬಸ್ ಚಾಲಕರು ಹಾಗೂ ನಿರ್ವಾಹಕರು ಸಹ ತಮ್ಮ ಉಪಹಾರ ಮತ್ತು ಚಹಾ ವಿರಾಮಕ್ಕಾಗಿ ಬಸ್ ನಿಲ್ದಾಣದಲ್ಲಿನ ಹೋಟೆಲ್ಗಳನ್ನೇ ಅವಲಂಬಿಸಿದ್ದಾರೆ.

ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದಾಗಿ ಬಸ್ ನಿಲ್ದಾಣದಲ್ಲಿನ ಕೆಲವು ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿವೆ. ಸಿಲಿಂಡರ್ ಕೊರತೆಯಿಂದಾಗಿ ಬಸ್ ನಿಲ್ದಾಣದಲ್ಲಿರುವ ಒಂದು ಪ್ರಮುಖ ಹೋಟೆಲ್ ಮಾಲೀಕರು ನಿನ್ನೆ ಮಧ್ಯಾಹ್ನದಿಂದಲೇ ತಮ್ಮ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎದುರಾಯಿತು.

ಬಾಗಲಕೋಟೆಯಿಂದ ಸ್ಮಾಲ್ ಸಿಲಿಂಡರ್ ತಂದು ಪುನಃ ಆರಂಭ:

ಸಿಲಿಂಡರ್ ಕೊರತೆಯಿಂದಾಗಿ ಸಂಪೂರ್ಣವಾಗಿ ಹೋಟೆಲ್ ಬಂದ್ ಮಾಡುವ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಬಾಗಲಕೋಟೆ ಜಿಲ್ಲೆಯಿಂದ ಐದು ಕೆಜಿ ಸಾಮರ್ಥ್ಯದ ಸಣ್ಣ ಸಿಲಿಂಡರ್ ಅನ್ನು ತರಿಸಿಕೊಂಡು ಮತ್ತೆ ಹೋಟೆಲ್ ಕಾರ್ಯಾರಂಭ ಮಾಡಿದ್ದಾರೆ. ಆದರೆ ಸಣ್ಣ ಸಿಲಿಂಡರ್ ನಿಂದ ಅಡುಗೆ ಮಾಡಲು ಸಾಧ್ಯವಾಗುವ ಪದಾರ್ಥಗಳ ಸಂಖ್ಯೆಯು ಬಹಳ ಮಟ್ಟಿಗೆ ಕಡಿಮೆಯಾಗಿರುವುದರಿಂದ ಈಗ ಕೇವಲ ಕೆಲವು ಉಪಹಾರ ಪದಾರ್ಥಗಳನ್ನು ಮಾತ್ರ ತಯಾರಿಸಲಾಗುತ್ತಿದೆ.

ಸಾಮಾನ್ಯವಾಗಿ ಪ್ರತಿದಿನ 15ರಿಂದ 20ಕ್ಕೂ ಹೆಚ್ಚು ಉಪಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಈ ಹೋಟೆಲ್ನಲ್ಲಿ ಈಗ ಕೇವಲ ಚಿತ್ರಾನ್ನ, ದೋಸೆ ಹಾಗೂ ಚಹಾ ಮಾತ್ರ ದೊರೆಯುತ್ತಿದೆ. ಸಿಲಿಂಡರ್ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಹೆಚ್ಚಿನ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

ಸಿಲಿಂಡರ್ ಖಾಲಿಯಾಗುವವರೆಗೆ ಮಾತ್ರ ಹೋಟೆಲ್ ಓಪನ್:

ಪ್ರಸ್ತುತ ಬಳಸುತ್ತಿರುವ ಸಣ್ಣ ಸಿಲಿಂಡರ್ ಖಾಲಿಯಾಗುವವರೆಗೆ ಮಾತ್ರ ಹೋಟೆಲ್ ಅನ್ನು ತೆರೆಯಲಾಗುತ್ತದೆ. ಸಿಲಿಂಡರ್ ಮುಗಿದ ನಂತರ ಮತ್ತೆ ಹೋಟೆಲ್ ಬಂದ್ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ಹೋಟೆಲ್ ಮಾಲೀಕ ಸುಧಾಕರ ತಿಳಿಸಿದ್ದಾರೆ.

ಈ ಪರಿಸ್ಥಿತಿಯಿಂದಾಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ದೂರ ಪ್ರಯಾಣ ಮಾಡುವ ಬಸ್ ಚಾಲಕರು ಹಾಗೂ ನಿರ್ವಾಹಕರು ಉಪಹಾರಕ್ಕಾಗಿ ಪರದಾಡುವಂತಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಉಪಹಾರ ಸೇವಿಸುವ ಜನರ ಸಂಖ್ಯೆ ಹೆಚ್ಚು ಇರುತ್ತದೆ. ಆದರೆ ಈಗ ಪದಾರ್ಥಗಳ ಕೊರತೆಯಿಂದಾಗಿ ಹಲವರು ಬೇರೆಡೆಗೆ ಹೋಗಿ ಉಪಹಾರ ಹುಡುಕುವ ಪರಿಸ್ಥಿತಿ ಉಂಟಾಗಿದೆ.

ಹೋಟೆಲ್ ಉದ್ಯಮಕ್ಕೂ ತಟ್ಟಿದ ಬಿಸಿ:

ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹೋಟೆಲ್ಗಳಲ್ಲಿ ಪ್ರತಿದಿನದ ಅಡುಗೆ ಕಾರ್ಯ ಸಂಪೂರ್ಣವಾಗಿ ಗ್ಯಾಸ್ ಸಿಲಿಂಡರ್ ಮೇಲೆ ಅವಲಂಬಿತವಾಗಿರುವುದರಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ವ್ಯಾಪಾರ ನಡೆಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಮುಂದುವರಿದರೆ ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಎಲ್ಪಿಜಿ ಗ್ಯಾಸ್ ಸರಬರಾಜಿನ ಮೇಲೂ ಇನ್ನಷ್ಟು ಪರಿಣಾಮ ಬೀಳುವ ಸಾಧ್ಯತೆ ಇದ್ದು, ಇದರಿಂದ ಹೋಟೆಲ್ ಉದ್ಯಮದ ಜೊತೆಗೆ ಸಾಮಾನ್ಯ ಜನರ ದೈನಂದಿನ ಜೀವನದ ಮೇಲೂ ಸಂಕಷ್ಟ ಹೆಚ್ಚುವ ಭೀತಿ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande