ಡೇವಿಸ್ ಕಪ್ ಅರ್ಹತಾ ಸುತ್ತು ; ನೆದರ್ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ 3–2 ಭರ್ಜರಿ ಜಯ
ಬೆಂಗಳೂರು, 09 ಫೆಬ್ರವರಿ (ಹಿ.ಸ.) : ಆ್ಯಂಕರ್ : ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣೇಶ್ವರ ಸುರೇಶ್ ಅವರ ಅದ್ಭುತ ಆಟದ ನೆರವಿನಿಂದ ಭಾರತ ಡೇವಿಸ್ ಕಪ್ ಅರ್ಹತಾ ಸುತ್ತು–1ರಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3–2 ಅಂತರದಿಂದ ಮಣಿಸಿ ಮಹತ್ವದ ಗೆಲುವು ಸಾಧಿಸಿದೆ. ಭಾನುವಾರ ಬೆಂಗಳೂರಿನ ಎಸ್‌ಎಂ ಕೃಷ್ಣ ಟೆನಿಸ
Devi's cup


ಬೆಂಗಳೂರು, 09 ಫೆಬ್ರವರಿ (ಹಿ.ಸ.) :

ಆ್ಯಂಕರ್ : ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣೇಶ್ವರ ಸುರೇಶ್ ಅವರ ಅದ್ಭುತ ಆಟದ ನೆರವಿನಿಂದ ಭಾರತ ಡೇವಿಸ್ ಕಪ್ ಅರ್ಹತಾ ಸುತ್ತು–1ರಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 3–2 ಅಂತರದಿಂದ ಮಣಿಸಿ ಮಹತ್ವದ ಗೆಲುವು ಸಾಧಿಸಿದೆ. ಭಾನುವಾರ ಬೆಂಗಳೂರಿನ ಎಸ್‌ಎಂ ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ರೋಮಾಂಚಕ ಜಯ ದಾಖಲಿಸಿ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಎರಡನೇ ಹಂತಕ್ಕೆ ಅರ್ಹತೆ ಪಡೆದಿದೆ. ಎಂಟು ತಂಡಗಳ ಡೇವಿಸ್ ಕಪ್ ಫೈನಲ್ ಪ್ರವೇಶವೇ ಈಗ ಭಾರತದ ಪ್ರಮುಖ ಗುರಿಯಾಗಿದೆ.

ನಿರ್ಣಾಯಕ ಪಂದ್ಯದಲ್ಲಿ ಸುರೇಶ್ 6–4, 7–6 (4) ಸೆಟ್‌ಗಳಿಂದ ಗೈ ಡೆನ್ ಔಡೆನ್ ಅವರನ್ನು ಮಣಿಸಿ ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಭಾರೀ ಒತ್ತಡದ ಈ ಪಂದ್ಯದಲ್ಲಿ ಸುರೇಶ್ 15 ಏಸ್‌ಗಳನ್ನು ಬಾರಿಸಿ ತಮ್ಮ ಸರ್ವ್ ಶಕ್ತಿಯನ್ನು ಪ್ರದರ್ಶಿಸಿದರು. ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ಸರ್ವ್ ಬ್ರೇಕ್ ಮಾಡಿ ಮುನ್ನಡೆ ಸಾಧಿಸಿದ ಅವರು, ಎರಡನೇ ಸೆಟ್‌ನಲ್ಲಿ ಟೈಬ್ರೇಕ್‌ಗೆ ತಲುಪಿದಾಗಲೂ ಶಾಂತತೆ ಕಾಪಾಡಿಕೊಂಡು ಗೆಲುವು ತಮ್ಮದಾಗಿಸಿಕೊಂಡರು.

ದಿನದ ಆರಂಭದಲ್ಲಿ ಎರಡೂ ತಂಡಗಳು 1–1 ಸಮಬಲದಲ್ಲಿದ್ದವು. ಡಬಲ್ಸ್ ಪಂದ್ಯದಲ್ಲಿ ಭಾರತದ ಜೋಡಿ ದಕ್ಷಿಣೇಶ್ವರ ಸುರೇಶ್ – ಯೂಕಿ ಭಾಂಬ್ರಿ, ನೆದರ್ಲ್ಯಾಂಡ್ಸ್‌ನ ಡೇವಿಡ್ ಪೆಲ್ ಹಾಗೂ ಸ್ಯಾಂಡರ್ ಅರೆಂಡ್ಸ್ ಅವರನ್ನು 7–6 (0), 3–6, 7–6 (1) ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ 2–1 ಮುನ್ನಡೆ ಒದಗಿಸಿತು. ಆದರೆ ನಂತರದ ಸಿಂಗಲ್ಸ್ ಪಂದ್ಯದಲ್ಲಿ ಜಾಸ್ಪರ್ ಡಿ ಜೊಂಗ್, ಸುಮಿತ್ ನಾಗಲ್ ಅವರನ್ನು 5–7, 6–1, 6–4 ಸೆಟ್‌ಗಳಿಂದ ಮಣಿಸಿ ಸ್ಕೋರ್ ಅನ್ನು 2–2 ಕ್ಕೆ ತಲುಪಿಸಿದರು.

ಭಾರತ ತಂಡದ ನಾಯಕ ರೋಹಿತ್ ರಾಜ್‌ಪಾಲ್, ಗಾಯದ ನಡುವೆಯೂ ಹೋರಾಟ ನಡೆಸಿದ ಸುಮಿತ್ ನಾಗಲ್ ಅವರನ್ನು ಶ್ಲಾಘಿಸಿದರು.

“ಕಳೆದ ಹತ್ತು ದಿನಗಳು ನಮಗೆ ಕಷ್ಟಕರವಾಗಿದ್ದವು. ನಮ್ಮ ನಂಬರ್ ಒನ್ ಆಟಗಾರ ಸುಮಿತ್ ನಾಗಲ್ ಗಾಯದಿಂದ ಬಳಲುತ್ತಿದ್ದರು. ಇದು ಅವರ ಶೇಕಡಾ 50 ರಷ್ಟು ಸಾಮರ್ಥ್ಯವೂ ಅಲ್ಲ. ಆದರೂ ಅವರು ಸಿಂಹದಂತೆ ಹೋರಾಡಿದರು ಮತ್ತು ನಾಯಕತ್ವ ತೋರಿದರು” ಎಂದು ಹೇಳಿದರು.

ಸುರೇಶ್ ಅವರ ಪ್ರದರ್ಶನ ಕುರಿತು ಮಾತನಾಡಿದ ರಾಜ್‌ಪಾಲ್,

“ಅವರು ನನ್ನ ಟ್ರಂಪ್ ಕಾರ್ಡ್. ಪ್ರತಿ ಬಾರಿ ಅವರನ್ನು ಬಳಸಿದಾಗ ಅದು ಫಲ ನೀಡುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಆಟ ಮತ್ತು ಮಾನಸಿಕ ಸಿದ್ಧತೆಯ ಬಗ್ಗೆ ಮಾತನಾಡಿದ ಸುರೇಶ್,

“ನಾನು 6 ಅಡಿ 6 ಇಂಚು ಎತ್ತರದ ಆಟಗಾರ. ಸರ್ವ್ ನನ್ನ ದೊಡ್ಡ ಶಕ್ತಿ. ಪ್ರತಿದಿನ ಅದರ ಮೇಲೆ ಅಭ್ಯಾಸ ಮಾಡುತ್ತೇನೆ. ನಿರ್ಣಾಯಕ ಕ್ಷಣಗಳಲ್ಲಿ ‘ನಾನು ಇದನ್ನು ಸಾವಿರಾರು ಬಾರಿ ಮಾಡಿದ್ದೇನೆ, ಇದು ಮತ್ತೊಂದು ಚೆಂಡು ಮಾತ್ರ’ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ” ಎಂದರು.

ಸುರೇಶ್ ಅವರ ಈ ವೀರ ಪ್ರದರ್ಶನದೊಂದಿಗೆ, ಭಾರತ ಡೇವಿಸ್ ಕಪ್ ಅಭಿಯಾನವನ್ನು ಭರ್ಜರಿಯಾಗಿ ಮುಂದುವರೆಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande