

ಬಳ್ಳಾರಿ, 05 ನವೆಂಬರ್ (ಹಿ.ಸ.)
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್ಸೆಟಿ) ಆವರಣದಲ್ಲಿ 13 ದಿನಗಳ ಉಚಿತ ‘ಕೃಷಿ ಉದ್ಯಮಿ’ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಸದಾಶಿವ ಉಪ್ಪಾರ ಅವರು, ಗುರುವಾರ ಉದ್ಘಾಟಿಸಿ, ರೈತರು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ತೊಟ್ಟಿ ರಚನೆ ಮುಂತಾದ ಪೂರಕ ಚಟುವಟಿಕೆಗಳ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಇದಕ್ಕೆ ಇಂತಹ ತರಬೇತಿಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಪ್ರತಿ ತಾಲೂಕು ಮಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳ್ಳೂರುಮಠ ಅವರು, ಸಂಸ್ಥೆಯಲ್ಲಿ ತಾಂತ್ರಿಕ ತರಬೇತಿಯೊಂದಿಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ವೃದ್ಧಿ ಹಾಗೂ ಸಂವಹನ ಕೌಶಲ್ಯಗಳ ತರಬೇತಿಯನ್ನೂ ನೀಡುವುದರಿಂದ ಶಿಬಿರಾರ್ಥಿಗಳಿಗೆ ವೃತ್ತಿ ಜೀವನದಲ್ಲಿ ಮುನ್ನಡೆಯಲು ನೆರವಾಗುತ್ತದೆ ಎಂದರು.
ಬಳ್ಳಾರಿಯ ಕೆನರಾ ಬ್ಯಾಂಕ್ ನ ಜಿಲ್ಲಾ ಲೀಡ್ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ ಅವರು, ವಿವಿಧ ಬ್ಯಾಂಕ್ ಗಳಲ್ಲಿ ಕೃಷಿ ಮತ್ತು ಸ್ವ-ಉದ್ಯೋಗಕ್ಕೆ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಜಿಲ್ಲಾ ಪಂಚಾಯತ್ ಎನ್ಆರ್ಎಲ್ಎಂ ಸಿಬ್ಬಂದಿ, ಉಪನ್ಯಾಸಕರಾದ ಜಡೇಪ್ಪ, ಸಿದ್ದಲಿಂಗಮ್ಮ, ಸಂತೋಷ್ ಕುಮಾರ್, ಪರಮೇಶ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 35 ಜನ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್