ಕೇಂದ್ರ ಸಚಿವರನ್ನು ಹಳ್ಳಿ ಗುಗ್ಗು ಎಂದು ಹೀಯಾಳಿಸಿರುವ ಪ್ರಿಯಾಂಕ್ ಖರ್ಗೆ ಗ್ರಾಮೀಣ ಜನರ ಕ್ಷಮೆ ಕೇಳಲಿ: ಆರ್. ಅಶೋಕ್ ಆಗ್ರಹ
ಬೆಂಗಳೂರು, 05 ನವೆಂಬರ್ (ಹಿ.ಸ.): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಹೀಯಾಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ದುರಹಂಕಾರ ಮತ್ತು ಗ್ರಾಮೀಣ ಜನರ ಬಗೆಗಿನ ತಾತ್ಸಾರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ಹೇಳಿಕೆಗಾಗಿ ರಾಜ್ಯದ ಗ್ರಾಮೀಣ ಜನರು ಹಾಗೂ ರೈ
ಪ್ರತಿಪಕ್ಷ ನಾಯಕ ಅಶೋಕ ಫೈಲ್ ಪೋಟೋ


ಬೆಂಗಳೂರು, 05 ನವೆಂಬರ್ (ಹಿ.ಸ.):

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಎಂದು ಹೀಯಾಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ದುರಹಂಕಾರ ಮತ್ತು ಗ್ರಾಮೀಣ ಜನರ ಬಗೆಗಿನ ತಾತ್ಸಾರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ಹೇಳಿಕೆಗಾಗಿ ರಾಜ್ಯದ ಗ್ರಾಮೀಣ ಜನರು ಹಾಗೂ ರೈತಾಪಿ ವರ್ಗದ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಿಯಾಂಕ್ ಖರ್ಗೆ ಅವರು ಅವಮಾನಿಸಿದ್ದು ಕೇವಲ ಒಬ್ಬ ವ್ಯಕ್ತಿಯನ್ನಲ್ಲ. ಈ ನಾಡಿನ ಮಣ್ಣಿನಲ್ಲಿ ನೇಗಿಲು ಹಿಡಿಯುವ ರೈತರನ್ನು, ಹಳ್ಳಿಗಾಡಿನ ಜನರನ್ನು, ಗ್ರಾಮೀಣ ಯುವಜನತೆಯನ್ನು ಹಾಗೂ ಹಳ್ಳಿಗಳಿಂದಲೇ ಬದುಕು ಕಟ್ಟಿಕೊಂಡಿರುವ ಕೋಟ್ಯಂತರ ಕನ್ನಡಿಗರನ್ನು ಎಂದು ಕಿಡಿಕಾರಿದ್ದಾರೆ.

ಹಳ್ಳಿಯೆಂದರೆ ಪ್ರಿಯಾಂಕ್ ಖರ್ಗೆ ಅವರಿಗೆ ಏಕೆ ಇಷ್ಟೊಂದು ತಾತ್ಸಾರ ಮತ್ತು ಅಸಡ್ಡೆ? ಹಳ್ಳಿಯಿಂದ ಬಂದವರು ಎಂದರೆ ಏಕೆ ಕೀಳರಿಮೆ ಎಂದು ಪ್ರಶ್ನಿಸಿರುವ ಅಶೋಕ್, ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಹಳ್ಳಿಯಿಂದ ಬಂದವರು. ಎರಡು ಬಾರಿ ಸಚಿವರನ್ನಾಗಿ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ಬಂದವರು ಎಂದು ನೆನಪಿಸಿದ್ದಾರೆ.

ಜನರ ತಟ್ಟೆಗೆ ಅನ್ನ ಬರುವುದು ಹಳ್ಳಿಗಳಿಂದಲೇ. ರೈತರು ಬೆವರು ಸುರಿಸಿ ಬೆಳೆದ ಅನ್ನವನ್ನು ಸೇವಿಸುತ್ತಾ ಅದೇ ಹಳ್ಳಿಗರನ್ನು ಹೀಯಾಳಿಸುವುದು ಯಾವ ರೀತಿಯ ಮನಸ್ಥಿತಿ ಎಂದು ಪ್ರಶ್ನಿಸಿದ್ದಾರೆ.

ನಟ ಡಾ. ರಾಜ್‌ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಲನಚಿತ್ರ ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವುದಕ್ಕೆ ಕಾರಣ ಹಳ್ಳಿಯ ಮಣ್ಣಿನ ಮಹತ್ವ, ಕೃಷಿಯ ಘನತೆ, ರೈತರ ಬೆವರಿನ ಬೆಲೆ ಹಾಗೂ ಮನುಷ್ಯ ತನ್ನ ಬೇರುಗಳನ್ನು ಮರೆಯಬಾರದು ಎಂಬ ಜೀವನ ಮೌಲ್ಯಗಳನ್ನು ಸಾರಿರುವುದೇ ಆಗಿದೆ ಎಂದು ಹೇಳಿದ್ದಾರೆ.

ಹಳ್ಳಿಯವರನ್ನು 'ಗುಗ್ಗು' ಎಂದು ಕರೆಯುವ ಮನಸ್ಥಿತಿಗೆ ನಾಚಿಕೆಯಾಗಬೇಕು. ಹಳ್ಳಿ ಗುಗ್ಗು ಎಂಬ ಮಾತು ಹಳ್ಳಿಯವರಿಗಲ್ಲ, ಹಳ್ಳಿಯ ಮಹತ್ವವನ್ನೇ ಅರಿಯದ ಅಹಂಕಾರಿಗಳಿಗೆ ಅನ್ವಯಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಹಳ್ಳಿಯ ಮಣ್ಣಿನಲ್ಲಿ ಹುಟ್ಟುವುದು ಅವಮಾನವಲ್ಲ, ಹೆಮ್ಮೆ. ಗ್ರಾಮೀಣ ಬದುಕು ದೌರ್ಬಲ್ಯವಲ್ಲ, ಅದು ನಮ್ಮ ಶಕ್ತಿ ಮತ್ತು ಸಂಸ್ಕೃತಿ. ಗ್ರಾಮೀಣ ಜನರ ಸ್ವಾಭಿಮಾನವನ್ನು ಕೆಣಕುವ ಮೊದಲು ಮಾತಿನ ಮೇಲೆ ಹಿಡಿತವಿರಲಿ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಗ್ರಾಮೀಣ ಜನರು ಮತ್ತು ರೈತಾಪಿ ವರ್ಗದ ಕ್ಷಮೆ ಕೇಳಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಹಳ್ಳಿಯನ್ನು ಹೀಯಾಳಿಸುವ ಅಹಂಕಾರಕ್ಕೆ ಗ್ರಾಮೀಣ ಭಾಗದ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande