

ಚಂಡೀಗಢ, 05 ನವೆಂಬರ್ (ಹಿ.ಸ.):
ಭಾರತದ ಮತದಾರರ ಪಟ್ಟಿಯಲ್ಲಿ ಹಾಗೂ ದೇಶದಲ್ಲಿ ಅಕ್ರಮ ಒಳನುಸುಳುಕೋರರಿಗೆ ಯಾವುದೇ ಸ್ಥಾನವಿಲ್ಲ. ಅವರನ್ನು ಮೊದಲು ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಬಳಿಕ ದೇಶದಿಂದ ಹೊರಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದ್ದಾರೆ.
ಹರಿಯಾಣದ ಕರ್ನಾಲ್ನಲ್ಲಿ ಗುರುವಾರ ಆಯೋಜಿಸಿದ್ದ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಕೋಟಿ ಒಳನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮತ್ತು ಸಮಾವೇಶಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಎಸ್ಐಆರ್ (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ವಿಷಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರ್ಚೆಗೆ ಸವಾಲು ಹಾಕುತ್ತಾರೆ. ಆದರೆ ದೇಶದ ಪ್ರಮುಖ ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಹಿಂದೇಟು ಹಾಕುತ್ತಾರೆ ಎಂದು ಟೀಕಿಸಿದರು.
ಎಸ್ಐಆರ್ ಕುರಿತು ಚರ್ಚಿಸಲು ಲೋಕಸಭೆಯ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಹುಲ್ ಗಾಂಧಿ ಮತ್ತು ಅವರ ಸಹೋದ್ಯೋಗಿಗಳು ಸಂಸತ್ತಿನಲ್ಲಿ ಈ ವಿಷಯದ ಚರ್ಚೆಯಿಂದ ಪಲಾಯನ ಮಾಡುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಅಮಿತ್ ಶಾ ಹೇಳಿದರು.
ಒಳನುಸುಳುಕೋರರನ್ನು ರಕ್ಷಿಸಲು ಮುಂದಾಗಿರುವ ಕಾಂಗ್ರೆಸ್, ದೇಶದಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸುತ್ತಿದೆ. ಆದರೆ ವಾಸ್ತವವಾಗಿ 2.8 ಕೋಟಿ ಮತದಾರರು ಮೃತಪಟ್ಟಿದ್ದಾರೆ. ಸುಮಾರು 6.25 ಕೋಟಿ ಮತದಾರರು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡಿದ್ದಾರೆ. ಒಂದು ಕೋಟಿಗೂ ಅಧಿಕ ಮತದಾರರ ಹೆಸರುಗಳು ಮೂರು ಅಥವಾ ಅದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ದಾಖಲಾಗಿವೆ. ಇನ್ನು ಮೂರು ಕೋಟಿ ಮತದಾರರು ಚುನಾವಣಾ ಆಯೋಗದ ಮುಂದೆ ಹಾಜರಾಗುತ್ತಿಲ್ಲ ಹಾಗೂ ನೆಲಮಟ್ಟದಲ್ಲಿಯೂ ಪತ್ತೆಯಾಗುತ್ತಿಲ್ಲ ಎಂದು ಅವರು ಹೇಳಿದರು.
ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗುವ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಚರ್ಚಿಸಬೇಕಾದ ವಿಚಾರಗಳನ್ನು ಬೀದಿಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳಿಗೆ ಅತಿ ಹೆಚ್ಚು ಅವಮಾನ ಮಾಡುತ್ತಿರುವುದೂ ಕಾಂಗ್ರೆಸ್ ಪಕ್ಷವೇ ಎಂದು ಆರೋಪಿಸಿದರು.
ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಬೇಕು ಎಂದು ಸೂಚಿಸಿದ ಅಮಿತ್ ಶಾ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ನಿರಂತರವಾಗಿ ಚುನಾವಣಾ ಸೋಲು ಅನುಭವಿಸುತ್ತಿದೆ. ದೇಶದ ಸಾಂವಿಧಾನಿಕ ಸಂಸ್ಥೆಗಳಲ್ಲಿ ಕಾಂಗ್ರೆಸ್ನ ಪ್ರಾತಿನಿಧ್ಯವೂ ಕಡಿಮೆಯಾಗುತ್ತಿದೆ ಎಂದು ಟೀಕಿಸಿದರು.
ಹರಿಯಾಣದ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಉಲ್ಲೇಖಿಸಿದ ಅವರು, 2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಿರೀಕ್ಷೆಯಲ್ಲಿ ಲಡ್ಡುಗಳನ್ನು ಸಿದ್ಧಪಡಿಸಿತ್ತು. ಆದರೆ ಗೆಲುವು ಬಿಜೆಪಿಗೆ ಒಲಿಯಿತು. ಬಳಿಕ ಮಹಾರಾಷ್ಟ್ರ, ಬಿಹಾರ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ ಎಂದು ವ್ಯಂಗ್ಯವಾಡಿದರು.
2014 ಮತ್ತು 2019ರ ಚುನಾವಣೆಗಳ ಸಂದರ್ಭದಲ್ಲಿ ಎಸ್ಐಆರ್ ಇರಲಿಲ್ಲ. ಆದರೂ ಕಾಂಗ್ರೆಸ್ ಸೋಲು ಅನುಭವಿಸಿತ್ತು. ಸತತ ಸೋಲುಗಳಿಂದ ಹತಾಶಗೊಂಡಿರುವ ಕಾಂಗ್ರೆಸ್ ಈಗ ಎಸ್ಐಆರ್ ಮೇಲೆ ಸೋಲಿನ ಹೊಣೆ ಹೊರಿಸುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವರನ್ನು ಸ್ವಾಗತಿಸಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ, ರಾಜ್ಯದಲ್ಲಿಯೂ ಕಾಂಗ್ರೆಸ್ಗೆ ಯಾವುದೇ ಪ್ರಮುಖ ವಿಷಯಗಳಿಲ್ಲ. ಕಾಂಗ್ರೆಸ್ ನಾಯಕರು ಸುಳ್ಳುಗಳ ಸರಮಾಲೆ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹರಿಯಾಣ ಬಿಜೆಪಿ ಅಧ್ಯಕ್ಷೆ ಡಾ. ಅರ್ಚನಾ ಗುಪ್ತಾ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಈ ಅಭಿಯಾನದಡಿ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ನ ಸುಳ್ಳುಗಳನ್ನು ಜನರಿಗೆ ತಿಳಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹಾಗೂ ಕರ್ನಾಲ್ ಸಂಸದ ಮನೋಹರ್ ಲಾಲ್, ಬಿಜೆಪಿ ಉಸ್ತುವಾರಿ ಸ್ಮೃತಿ ಇರಾನಿ, ಹರಿಯಾಣ ವಿಧಾನಸಭಾಧ್ಯಕ್ಷ ಹರವಿಂದರ್ ಕಲ್ಯಾಣ್, ಸಚಿವರಾದ ರಾವ್ ನರಬೀರ್ ಸಿಂಗ್, ಕೃಷ್ಣ ಬೇಡಿ, ಕೃಷ್ಣ ಲಾಲ್ ಪನ್ವಾರ್, ಮಹಿಪಾಲ್ ಧಾಂಡಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
-------------
ಹಿಂದೂಸ್ತಾನ್ ಸಮಾಚಾರ್ / Rakesh.M.B.