ಬೆಂಗಳೂರು: 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕವೇ ಉಚಿತ ಇ-ಖಾತಾ ವಿತರಣೆ
ಬೆಂಗಳೂರಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕವೇ ಉಚಿತವಾಗಿ ಇ-ಖಾತಾ ಪ್ರಮಾಣಪತ್ರ ವಿತರಿಸಲು ಜಿಬಿಎ ಮುಂದಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಇ-ಖಾತಾ ಪಿಡಿಎಫ್ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು: 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕವೇ ಉಚಿತ ಇ-ಖಾತಾ ವಿತರಣೆ


ಬೆಂಗಳೂರು, 26 ನವೆಂಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ತಿಗಳಿಗೆ ವಾಟ್ಸಾಪ್ ಮೂಲಕವೇ ಉಚಿತವಾಗಿ ಇ-ಖಾತಾ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಮೂಲಕ ಸುಮಾರು 24 ಲಕ್ಷ ಆಸ್ತಿ ಮಾಲೀಕರು ಮನೆಯಲ್ಲಿಯೇ ಕುಳಿತು ತಮ್ಮ ಇ-ಖಾತಾ ಪಡೆಯಲು ಅವಕಾಶ ದೊರೆಯಲಿದೆ.

ಈ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದು, ಜಿಬಿಎ ವ್ಯಾಪ್ತಿಯ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಸೇರಿದಂತೆ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಈ ಸೌಲಭ್ಯ ದೊರೆಯಲಿದೆ.

ಪ್ರತಿಯೊಬ್ಬ ಆಸ್ತಿ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಿಶಿಷ್ಟ ಇ-ಪಿಐಡಿ (ePID) ಸಂಖ್ಯೆಯೊಂದಿಗೆ ಇ-ಖಾತಾ ಪ್ರಮಾಣಪತ್ರವನ್ನು ಪಿಡಿಎಫ್ ರೂಪದಲ್ಲಿ ಕಳುಹಿಸಲಾಗುತ್ತದೆ.

ಇ-ಖಾತಾದಲ್ಲಿ ತಿದ್ದುಪಡಿಗೂ ಅವಕಾಶ

ಇ-ಖಾತಾ ಪ್ರಮಾಣಪತ್ರದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್ನ ಲಿಂಕ್ ಕೂಡ ಲಭ್ಯವಾಗಲಿದೆ. ಆಸ್ತಿ ಮಾಲೀಕರು ತಮ್ಮ ಇ-ಪಿಐಡಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಮೂಲಕ ಇ-ಖಾತಾದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮಧ್ಯವರ್ತಿಗಳಿಗೆ ಹಣ ನೀಡುವ ಅಗತ್ಯವಿಲ್ಲ

ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಇ-ಖಾತಾ ಪಡೆಯಲು ಯಾವುದೇ ಸರ್ಕಾರಿ ಕಚೇರಿಗೆ ಅಲೆದಾಡುವ ಅಥವಾ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಡಿಜಿಟಲ್ ಸೇವೆಗಳ ಮೂಲಕ ಆಸ್ತಿ ದಾಖಲೆಗಳನ್ನು ಸುಲಭವಾಗಿ ಜನರಿಗೆ ತಲುಪಿಸುವುದು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಈ ಕ್ರಮದ ಉದ್ದೇಶವಾಗಿದೆ.

ಆಸ್ತಿ ಮಾಲೀಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಸಂದೇಶಗಳನ್ನು ಪರಿಶೀಲಿಸಿ ಪ್ರಮಾಣಪತ್ರ ಪಡೆದುಕೊಳ್ಳಬಹುದಾಗಿದೆ. ಇ-ಖಾತಾ ಹೆಸರಿನಲ್ಲಿ ವಂಚನೆ ನಡೆಯುವ ಸಾಧ್ಯತೆ ಇರುವುದರಿಂದ ಅಪರಿಚಿತ ಲಿಂಕ್ಗಳನ್ನು ತೆರೆಯದಂತೆ ಹಾಗೂ ಯಾವುದೇ ವ್ಯಕ್ತಿಗೆ ಹಣ ಅಥವಾ ಒಟಿಪಿ ನೀಡದಂತೆ ಜಿಬಿಎ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande