ಡಿಸಿ ನಿವಾಸದಲ್ಲಿ ಅದ್ಧೂರಿ ಪಾರ್ಟಿ; ಜಿಲ್ಲಾಧಿಕಾರಿಗೆ ರೈತನಿಂದಲೇ ಫೋನ್ ಮಾಡಿ ತರಾಟೆ
ಗದಗ, 23 ನವೆಂಬರ್ (ಹಿ.ಸ.) ಗದಗ ಜಿಲ್ಲೆಯ ರೈತರು ಮಳೆ ಕೊರತೆ, ಬೆಳೆಹಾನಿ ಹಾಗೂ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಅದ್ಧೂರಿ ಔತಣಕೂಟ ಹಾಗೂ ಮೋಜು-ಮಸ್ತಿಯ ಕಾರ್ಯಕ್ರಮ ಇದೀಗ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗ
ಫೋಟೋ


ಗದಗ, 23 ನವೆಂಬರ್ (ಹಿ.ಸ.)

ಗದಗ ಜಿಲ್ಲೆಯ ರೈತರು ಮಳೆ ಕೊರತೆ, ಬೆಳೆಹಾನಿ ಹಾಗೂ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಅದ್ಧೂರಿ ಔತಣಕೂಟ ಹಾಗೂ ಮೋಜು-ಮಸ್ತಿಯ ಕಾರ್ಯಕ್ರಮ ಇದೀಗ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನವೆಂಬರ್ 30ರಂದು ನಿವೃತ್ತಿಯಾಗಲಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಬೀಳ್ಕೊಡುಗೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಆವರಣದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಈ ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ತಡರಾತ್ರಿ 12 ಗಂಟೆಯವರೆಗೂ ಹಾಡು, ಕುಣಿತ ಹಾಗೂ ಔತಣಕೂಟ ನಡೆಸಿದ್ದಾರೆ.

ಒಂದೆಡೆ ಜಿಲ್ಲೆಯ ರೈತರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು, ಬೆಳೆ ವಿಮೆ ಹಾಗೂ ಬೆಳೆಹಾನಿ ಪರಿಹಾರಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಅದ್ಧೂರಿ ಪಾರ್ಟಿಯಲ್ಲಿ ತೊಡಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಮನೆಗಳಲ್ಲಿ ಒಲೆ ಹಚ್ಚುವುದಕ್ಕೂ ಕಷ್ಟವಾಗಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿವಾಸದಲ್ಲಿ ವೆಜ್ ಮತ್ತು ನಾನ್ವೆಜ್ ಭರ್ಜರಿ ಔತಣಕೂಟ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಜಿಲ್ಲಾಧಿಕಾರಿ ನಿವಾಸಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಮೈಸೂರಿನ ಅರಮನೆಯಂತೆ ಝಗಮಗಿಸುವಂತೆ ಅಲಂಕರಿಸಲಾಗಿತ್ತು ಎನ್ನಲಾಗಿದೆ. ಈ ಸಂಭ್ರಮದ ದೃಶ್ಯಗಳು ಹಾಗೂ ಪಾರ್ಟಿಯ ವಿಚಾರ ರೈತರ ಅಸಮಾಧಾನಕ್ಕೆ ಮತ್ತಷ್ಟು ತುಪ್ಪ ಸುರಿದಿವೆ.

ಈ ವಿಚಾರವಾಗಿ ಶಿರಹಟ್ಟಿ ತಾಲೂಕಿನ ಒಡವಿ ಗ್ರಾಮದ ರೈತ ರಾಜೀವ್ ಅವರು ನೇರವಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರೈತರು ಬರದಿಂದ ತತ್ತರಿಸುತ್ತಿದ್ದಾರೆ. ಬೆಳೆ ಹಾನಿಯಿಂದ ಅನ್ನದಾತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಪಾರ್ಟಿ ಸಂಭ್ರಮವೇ ಮುಖ್ಯವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ರೈತರ ಕಷ್ಟಗಳಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತವೇ ಮೋಜು-ಮಸ್ತಿಯಲ್ಲಿ ತೊಡಗಿರುವುದು ಸರಿಯಲ್ಲ. ರೈತರ ಕಣ್ಣೀರು ಒರೆಸಲು ಮುಂದಾಗಬೇಕು. ಬೆಳೆಹಾನಿ, ಪರಿಹಾರ ಹಾಗೂ ರೈತರ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ರೈತ ರಾಜೀವ್ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಬರದ ಸಂಕಷ್ಟದಲ್ಲಿ ಸಿಲುಕಿರುವ ಗದಗ ಜಿಲ್ಲೆಯ ರೈತರ ನೋವು ಒಂದೆಡೆಯಾದರೆ, ಜಿಲ್ಲಾಧಿಕಾರಿ ನಿವಾಸದಲ್ಲಿ ನಡೆದ ಅದ್ಧೂರಿ ಬೀಳ್ಕೊಡುಗೆ ಪಾರ್ಟಿ ಮತ್ತೊಂದೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ರೈತರ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳ ಸಂಭ್ರಮಾಚರಣೆ ಎಷ್ಟು ಸಮಂಜಸ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande