
ಕಲಬುರಗಿ, 12 ನವೆಂಬರ್(ಹಿಂ, ಸ):
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 3,600 ರೂ. ದರ ನೀಡುವಂತೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ರೈತರು ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳು ಕಬ್ಬಿಗೆ ಪ್ರತಿ ಟನ್ಗೆ 3,600 ರೂ. ನೀಡಲು ಮುಂದಾಗಿವೆ. ಆದರೆ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕೇವಲ 3,200 ರೂ. ನೀಡುವುದಾಗಿ ಹೇಳುತ್ತಿವೆ.
ಇದರಿಂದ ಆಕ್ರೋಶಗೊಂಡಿರುವ ಕಬ್ಬು ಬೆಳೆಗಾರರು, ಬೆಳಗಾವಿ ಜಿಲ್ಲೆಯ ರೈತರಿಗೆ ನೀಡುವ ದರವನ್ನೇ ಕಲಬುರಗಿ ಜಿಲ್ಲೆಯ ರೈತರಿಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಫಜಲಪುರ ತಾಲ್ಲೂಕಿನ ಚಿಣಮಗೇರ ಗ್ರಾಮದಲ್ಲಿರುವ KPR ಸಕ್ಕರೆ ಕಾರ್ಖಾನೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಖಾನೆಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಟನ್ಗೆ 3,600 ರೂ. ಘೋಷಣೆ ಮಾಡುವವರೆಗೂ ಕಾರ್ಖಾನೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಕಬ್ಬು ಬೆಳೆಯಲು ರೈತರು ಸಾಕಷ್ಟು ಶ್ರಮ ಹಾಗೂ ಬಂಡವಾಳ ಹೂಡಿದ್ದು, ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ನ್ಯಾಯಯುತ ಬೆಲೆ ನೀಡಬೇಕು ಎಂಬುದು ಅವರ ಒತ್ತಾಯವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದು ದರ, ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ದರ ನಿಗದಿಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿರುವ ರೈತರು, ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.
ಕಬ್ಬಿನ ದರದ ವಿಚಾರವಾಗಿ ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಜಟಾಪಟಿ ಮುಂದುವರಿದಿದ್ದು, 3,600 ರೂ. ದರ ಘೋಷಣೆಯಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಸ್ಪಷ್ಟಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R