
ತುಮಕೂರು, 12 ನವೆಂಬರ್ (ಹಿ.ಸ.):
ಕುಣಿಗಲ್ ತಾಲೂಕಿನಲ್ಲಿ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ನಾಲೆ ಯೋಜನೆ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಯೋಜನೆಯ ಕಾಮಗಾರಿಗೆ ನ್ಯಾಯಾಲಯದಿಂದ ಅನುಮತಿ ದೊರೆತಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ಘೋಷಿಸಿದ್ದಾರೆ. ಆದರೆ, ಯೋಜನೆಯ ನೀರಿನ ಹಂಚಿಕೆ ವಿಚಾರವಾಗಿ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಮತ್ತು ಜೆಡಿಎಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ.
ಯೋಜನೆ ಕುರಿತು ಮಾತನಾಡಿದ ಶಾಸಕ ಡಾ. ಎಚ್.ಡಿ. ರಂಗನಾಥ್, ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ನಾಲೆ ಕಾಮಗಾರಿಗೆ ನ್ಯಾಯಾಲಯದಿಂದ ಅನುಮತಿ ದೊರೆತಿದೆ. ಹೀಗಾಗಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಕೆಲವರು ರಾಜಕೀಯ ಉದ್ದೇಶದಿಂದ ಯೋಜನೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ತಾಲೂಕು ಅಧ್ಯಕ್ಷ ಜಗದೀಶ್, ಲಿಂಕ್ ನಾಲೆ ಯೋಜನೆಗೆ ತಮ್ಮ ವಿರೋಧವಿಲ್ಲ. ಆದರೆ, ಕುಣಿಗಲ್ ತಾಲೂಕಿಗೆ ಮೀಸಲಿರುವ ನೀರನ್ನು ಮಾಗಡಿ ತಾಲೂಕಿಗೆ ಕೊಂಡೊಯ್ಯುವುದಕ್ಕೆ ನಮ್ಮ ಆಕ್ಷೇಪವಿದೆ. ಕುಣಿಗಲ್ ಪಾಲಿನ ನೀರಿಗೆ ಯಾವುದೇ ಅನ್ಯಾಯವಾಗಬಾರದು ಎಂದು ಹೇಳಿದ್ದಾರೆ.
ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲೂಕಿಗೆ ಒಂದು ಟಿಎಂಸಿ ನೀರು ಒದಗಿಸುತ್ತಿರುವುದಕ್ಕೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ಮಾಗಡಿ ತಾಲೂಕಿಗೆ ನೀರು ಒದಗಿಸುವ ಉದ್ದೇಶವಿದ್ದರೆ ಸರ್ಕಾರವೇ ಪ್ರತ್ಯೇಕವಾಗಿ ನೀರಿನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದೆ.
ಲಿಂಕ್ ನಾಲೆ ಕಾಮಗಾರಿ ಆರಂಭಿಸುವುದಕ್ಕೂ ಮೊದಲು ಹೇಮಾವತಿ ನಾಲೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕುಣಿಗಲ್ ತಾಲೂಕಿನ ರೈತರು ಹಾಗೂ ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಜೆಡಿಎಸ್ ಆಗ್ರಹಿಸಿದೆ.
ಹೇಮಾವತಿ ಲಿಂಕ್ ನಾಲೆ ಯೋಜನೆಯ ಕಾಮಗಾರಿ ಆರಂಭಿಸುವ ವಿಚಾರದೊಂದಿಗೆ ನೀರಿನ ಹಂಚಿಕೆಯ ವಿವಾದವೂ ಮುನ್ನೆಲೆಗೆ ಬಂದಿದ್ದು, ಶಾಸಕ ಡಾ. ಎಚ್.ಡಿ. ರಂಗನಾಥ್ ಮತ್ತು ಜೆಡಿಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R