ಹಾಸನಾಂಬೆ ಹುಂಡಿಯಲ್ಲಿ ವಿದೇಶಿ ಕರೆನ್ಸಿ, ಅಮಾನ್ಯಗೊಂಡ 1,000 ರೂ. ನೋಟು ಪತ್ತೆ
ಹಾಸನಾಂಬೆ ದೇವಿಯ ದರ್ಶನೋತ್ಸವ ಮುಕ್ತಾಯದ ಬೆನ್ನಲ್ಲೇ ಹುಂಡಿ ಕಾಣಿಕೆ ಹಣದ ಎಣಿಕೆ ಆರಂಭವಾಗಿದೆ. ಈ ವೇಳೆ ವಿದೇಶಿ ಕರೆನ್ಸಿ ಹಾಗೂ ನೋಟು ಅಮಾನ್ಯೀಕರಣಗೊಂಡ ಹಳೆಯ 1,000 ರೂಪಾಯಿ ನೋಟು ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ.
Hasanamba-Temple-Hundi-Foreign-Currency-Old-1000-Rupee-Note-Found


ಹಾಸನ, 12 ನವೆಂಬರ್ (ಹಿ.ಸ.):

ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನೋತ್ಸವ ಮುಕ್ತಾಯಗೊಂಡ ಬೆನ್ನಲ್ಲೇ ದೇವಿಯ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಆರಂಭವಾಗಿದೆ. ಈ ವೇಳೆ ವಿದೇಶಿ ಕರೆನ್ಸಿ ಹಾಗೂ ದೇಶದಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ ಹಳೆಯ 1,000 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದೆ.

ಕಂದಾಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಹುಂಡಿ ಹಣದ ಎಣಿಕೆ ಕಾರ್ಯ ನಡೆಯುತ್ತಿದ್ದು, ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸ್ಥಳದಲ್ಲಿದ್ದು, ಎಣಿಕೆ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದ್ದಾರೆ. ಸಿಬ್ಬಂದಿ ಭಕ್ತರು ಸಲ್ಲಿಸಿರುವ ಕಾಣಿಕೆಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿ ಎಣಿಕೆ ಮಾಡುತ್ತಿದ್ದಾರೆ.

ಹಾಸನಾಂಬೆ ದೇವಿಯ ದರ್ಶನಕ್ಕೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ದೇವಿಯ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಭಕ್ತರು ಸಲ್ಲಿಸಿರುವ ಕಾಣಿಕೆಗಳಲ್ಲಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಇದರೊಂದಿಗೆ ಹಲವು ವರ್ಷಗಳ ಹಿಂದೆ ಚಲಾವಣೆಯಿಂದ ಹಿಂಪಡೆಯಲಾಗಿರುವ ಹಳೆಯ 1,000 ರೂಪಾಯಿ ನೋಟು ಕೂಡ ದೊರೆತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಹಾಸನಾಂಬೆ ದರ್ಶನೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಕಾಣಿಕೆ ಹಾಗೂ ಹರಕೆಗಳನ್ನು ಸಲ್ಲಿಸುತ್ತಾರೆ. ಈ ಬಾರಿಯೂ ಹುಂಡಿಯಲ್ಲಿ ಎಷ್ಟು ಮೊತ್ತದ ಕಾಣಿಕೆ ಸಂಗ್ರಹವಾಗಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ಹುಂಡಿ ಹಣದ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಒಟ್ಟು ಸಂಗ್ರಹದ ಅಧಿಕೃತ ಮೊತ್ತ ಪ್ರಕಟವಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande