
ಕಲಬುರಗಿ, 12 ನವೆಂಬರ್ (ಹಿ.ಸ.):
ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಕಾಂಗ್ರೆಸ್ ಮುಖಂಡನಿಗೆ ಇದೀಗ ಸರ್ಕಾರದ ಅಧೀನದ ನಿಗಮ ಮಂಡಳಿಯಲ್ಲಿ ನಿರ್ದೇಶಕ ಸ್ಥಾನ ನೀಡಲಾಗಿದೆ.
ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
2025ರ ಜೂನ್ 22ರಂದು ಮಹಾರಾಷ್ಟ್ರ ಪೊಲೀಸರು ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗರಾಜ್ ಕಣ್ಣಿ ಅವರನ್ನು ಬಂಧಿಸಿದ್ದರು. ಮುಂಬೈನ ವಸತಿಗೃಹವೊಂದರಲ್ಲಿ ಅವರು ತಂಗಿದ್ದ ಕೊಠಡಿಯಲ್ಲಿ ಸುಮಾರು 27 ಸಾವಿರ ರೂಪಾಯಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್ ಪತ್ತೆಯಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿತ್ತು ಎನ್ನಲಾಗಿದೆ.
ಈ ಪ್ರಕರಣದ ಬಳಿಕ ಕಾಂಗ್ರೆಸ್ ಪಕ್ಷವು ಲಿಂಗರಾಜ್ ಕಣ್ಣಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಈ ಹಿಂದೆ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರಿಗೆ ಇದೀಗ ಕೆಕೆಆರ್ಟಿಸಿ ನಿರ್ದೇಶಕ ಸ್ಥಾನ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾದಕ ವಸ್ತು ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ವ್ಯಕ್ತಿಗೆ ಸರ್ಕಾರದ ಅಧೀನದ ನಿಗಮದಲ್ಲಿ ನಿರ್ದೇಶಕ ಸ್ಥಾನ ಕಲ್ಪಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನೇಮಕಾತಿ ಇದೀಗ ಕಲಬುರಗಿ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R