ಭಾರತ ಅಭಿವೃದ್ಧಿಯ ಹೊಸ ಎತ್ತರದತ್ತ, ಪ್ರತಿ ಪಕ್ಷಗಳ ರಾಜಕೀಯ ಪಾತಾಳದತ್ತ: ಬಿಜೆಪಿ ಟೀಕೆ
ರಾಹುಲ್ ಗಾಂಧಿ ಆರ್ಥಿಕತೆಯನ್ನು ಮೃತ ಆರ್ಥಿಕತೆ ಎಂದಿದ್ದರು; ಧನತೇರಸ್ನಲ್ಲಿ ಚಿನ್ನ, ಬೆಳ್ಳಿ ಖರೀದಿಯೇ ಭಾರತದ ಆರ್ಥಿಕ ಸಾಮರ್ಥ್ಯಕ್ಕೆ ಸಾಕ್ಷಿ: ಸುಧಾಂಶು ತ್ರಿವೇದಿ
डॉ सुधांशु त्रिवेदी, भाजपा सांसद


ನವದೆಹಲಿ, 11 ನವೆಂಬರ್ (ಹಿ.ಸ.):

ಭಾರತ ಅಭಿವೃದ್ಧಿಯ ಹೊಸ ಎತ್ತರಗಳತ್ತ ಸಾಗುತ್ತಿದ್ದರೆ, ವಿರೋಧ ಪಕ್ಷಗಳ ರಾಜಕೀಯ ದಿನದಿಂದ ದಿನಕ್ಕೆ ಕೆಳಮಟ್ಟಕ್ಕೆ ಕುಸಿಯುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ.

ಬುಧವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಆರ್ಥಿಕತೆಯ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಭಾರತೀಯ ಆರ್ಥಿಕತೆಯನ್ನು 'ಮೃತ ಆರ್ಥಿಕತೆ' ಎಂದು ಕರೆದಿದ್ದರು. ಆದರೆ, ಇದೇ ಆರ್ಥಿಕತೆಯ ಶಕ್ತಿ ಧನತೇರಸ್ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಯಲ್ಲಿ ವ್ಯಕ್ತವಾಗಿದೆ. ಧನತೇರಸ್ ಒಂದೇ ದಿನ ಭಾರತದಲ್ಲಿ ನಡೆದ ಚಿನ್ನ ಮತ್ತು ಬೆಳ್ಳಿ ಖರೀದಿಯ ಪ್ರಮಾಣವನ್ನು ಯುರೋಪ್ ಒಟ್ಟಾರೆಯಾಗಿ ಮೂರು ತಿಂಗಳಲ್ಲಿ ಖರೀದಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಇದು ಭಾರತದ ಆರ್ಥಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ದೇಶದ ಸಂಪ್ರದಾಯ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ವಿರೋಧ ಪಕ್ಷದ ನಾಯಕರ ಮನಸ್ಸಿನಲ್ಲಿ ಎಷ್ಟರಮಟ್ಟಿಗೆ ನಕಾರಾತ್ಮಕ ಭಾವನೆಯಿದೆ ಎಂಬುದನ್ನೂ ಅವರ ಹೇಳಿಕೆಗಳು ತೋರಿಸುತ್ತವೆ. ದೇಶದ ಸಾಧನೆಗಳನ್ನು ಒಪ್ಪಿಕೊಳ್ಳುವ ಬದಲು ವಿರೋಧ ಪಕ್ಷಗಳು ಆಧಾರರಹಿತ ಟೀಕೆಗಳಲ್ಲಿ ತೊಡಗಿವೆ ಎಂದು ಆರೋಪಿಸಿದರು.

ದೀಪಾವಳಿಗೆ ಈದ್ ಹಬ್ಬದ ಹೋಲಿಕೆ ಏಕೆ?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೀಪಾವಳಿಯನ್ನು 'ಸಂತೋಷದ ಈದ್' ಎಂದು ಬಣ್ಣಿಸಿರುವ ಕುರಿತು ಪ್ರತಿಕ್ರಿಯಿಸಿದ ತ್ರಿವೇದಿ, ಈ ಹೇಳಿಕೆ ಆಶ್ಚರ್ಯಕರವಾಗಿದೆ ಎಂದರು.

ಖರ್ಗೆ ಅವರು ಕರ್ನಾಟಕದವರಾಗಿದ್ದು, ಕನ್ನಡ ಭಾಷೆಯಲ್ಲಿ ಹಬ್ಬವನ್ನು ಸೂಚಿಸಲು 'ಉತ್ಸವ' ಅಥವಾ 'ಹಬ್ಬ' ಎಂಬ ಪದಗಳನ್ನು ಬಳಸಲಾಗುತ್ತದೆ. ಹೀಗಿರುವಾಗ 'ಈದ್' ಎಂಬ ಪದವನ್ನು ಬಳಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಇದು ಭಾರತೀಯ ಧರ್ಮ ಮತ್ತು ಸಂಸ್ಕೃತಿಗೆ ಯಾವ ಮಟ್ಟದಲ್ಲಿ ಅಗೌರವ ತೋರಿಸಲಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅಸ್ಮಿತೆಗೆ ಗೌರವ ತೋರಿಸುವ ಬದಲು ವಿವಾದಾತ್ಮಕ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ಶಕ್ತಿ ಪ್ರದರ್ಶನದ ಘೋಷಣೆ

ಡಿಸೆಂಬರ್ 12ರಂದು ಅಯೋಧ್ಯೆಯಲ್ಲಿ ಶಕ್ತಿ ಪ್ರದರ್ಶನ ನಡೆಸುವುದಾಗಿ ಸಮಾಜವಾದಿ ಪಕ್ಷ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜವಾದಿ ಪಕ್ಷ ಇದನ್ನು ತನ್ನ ಶಕ್ತಿ ಪ್ರದರ್ಶನ ಎಂದು ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಇದು ಬಿಜೆಪಿ ಸಿದ್ಧಾಂತ ಮತ್ತು ಭಾರತೀಯ ಸಮಾಜದ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುವ ಸಂದರ್ಭವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳು ಈಗ ಅಯೋಧ್ಯೆಗೆ ತೆರಳುವ ಬಗ್ಗೆ ಮಾತನಾಡುತ್ತಿರುವುದು ಪರಿಸ್ಥಿತಿಯ ಒತ್ತಡದಿಂದ. ಅವರಿಗೆ ಬೇರೆ ಆಯ್ಕೆ ಉಳಿದಿಲ್ಲ. ಭಾರತೀಯ ಸಮಾಜದ ಒಗ್ಗಟ್ಟಿನ ಶಕ್ತಿ ಈಗ ಗೋಚರಿಸುತ್ತಿದೆ ಎಂದು ಪ್ರತಿಪಾದಿಸಿದರು.

ಮುಂಬರುವ ಚುನಾವಣೆಗಳಲ್ಲಿಯೂ ಭಾರತೀಯ ಸಮಾಜ ಇದೇ ರೀತಿ ಇನ್ನಷ್ಟು ಒಗ್ಗಟ್ಟು ಪ್ರದರ್ಶಿಸಿದರೆ, ಇಂದು ಶ್ರೀರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ತೆರಳಿರುವ ಮತ್ತು ತಾವು 'ಚುನಾವಣಾ ಹಿಂದೂಗಳು' ಎಂದು ಕರೆದಿರುವ ನಾಯಕರು ಮುಂದಿನ ಚುನಾವಣೆಯ ವೇಳೆಗೆ ಸ್ವತಃ 'ಜೈ ಶ್ರೀರಾಮ್' ಘೋಷಣೆ ಕೂಗುವುದನ್ನು ಕಾಣಬಹುದು ಎಂದು ಸುಧಾಂಶು ತ್ರಿವೇದಿ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande