
ನವದೆಹಲಿ, 11 ನವೆಂಬರ್ (ಹಿ.ಸ.):
ದೆಹಲಿ ವಿಶ್ವವಿದ್ಯಾಲಯದ ರಾಮಾನುಜನ್ ಕಾಲೇಜಿನ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅನಸ್ ಖಾನ್ ವಿರುದ್ಧ ವಿದ್ಯಾರ್ಥಿನಿಯರಿಗೆ ಹಣ ಮತ್ತು ಇತರ ಸೌಲಭ್ಯಗಳ ಆಮಿಷವೊಡ್ಡಿ ಅನಿವಾಸಿ ಭಾರತೀಯ ಪುರುಷರೊಂದಿಗೆ ಕಳುಹಿಸಲು ಪ್ರಯತ್ನಿಸಿದ ಆರೋಪ ಕೇಳಿಬಂದಿದೆ. ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಅನಿವಾಸಿ ಭಾರತೀಯರ ಪ್ರಾಯೋಜಿತ ಕಾರ್ಯಕ್ರಮದ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ಸಂಪರ್ಕಿಸಲಾಗುತ್ತಿತ್ತು. ಅವರ ದೈಹಿಕ ಆಕಾರ ಮತ್ತು ಮೈಕಟ್ಟಿನ ಆಧಾರದ ಮೇಲೆ ಆಯ್ಕೆ ಮಾಡುವ ಕುರಿತು ಸಂದೇಶಗಳಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ ಎಂದು ವಿದ್ಯಾರ್ಥಿ ಪರಿಷತ್ ಆರೋಪಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿ ಅನಸ್ ಖಾನ್ ಅವರನ್ನು ಈಗಾಗಲೇ ಅಮಾನತುಗೊಳಿಸಿದೆ.
ವಿದ್ಯಾರ್ಥಿನಿಯರಿಗೆ ಹಣಕಾಸಿನ ಆಮಿಷವೊಡ್ಡಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿರುವುದು ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಯಂತಹ ಸಂಘಟಿತ ಅಪರಾಧ ಜಾಲಗಳ ಸಂಪರ್ಕದ ಅನುಮಾನ ಮೂಡಿಸಿದೆ ಎಂದು ವಿದ್ಯಾರ್ಥಿ ಪರಿಷತ್ ಹೇಳಿದೆ. ಅನಿವಾಸಿ ಭಾರತೀಯರ ಸಂಪರ್ಕಗಳು, ಹಣಕಾಸಿನ ವಹಿವಾಟುಗಳು ಹಾಗೂ ಸಂಭಾವ್ಯ ಅಂತರರಾಷ್ಟ್ರೀಯ ಜಾಲದ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಕಳೆದ ತಿಂಗಳೂ ರಾಷ್ಟ್ರೀಯ ವಿದ್ಯಾರ್ಥಿ ಸಂಘಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಾರ್ಯಕ್ರಮವೊಂದರ ಹೆಸರಿನಲ್ಲಿ ಯುವಕರನ್ನು ಕರೆದೊಯ್ಯುವ ಕುರಿತು ಇದೇ ರೀತಿಯ ಸಂಭಾಷಣೆಗಳು ಬಹಿರಂಗವಾಗಿದ್ದವು ಎಂದು ವಿದ್ಯಾರ್ಥಿ ಪರಿಷತ್ ಪ್ರತಿಪಾದಿಸಿದೆ. ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳ ಹಿಂದೆ ಹಣಕಾಸಿನ ಆಮಿಷ ಮತ್ತು ಅನುಮಾನಾಸ್ಪದ ಜಾಲಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದೆ.
ಇದಲ್ಲದೆ, 2018ರಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಅಂದಿನ ರಾಷ್ಟ್ರೀಯ ಅಧ್ಯಕ್ಷ ಫಿರೋಜ್ ಖಾನ್ ವಿರುದ್ಧ ಸಂಘಟನೆಯ ಮಹಿಳಾ ಪದಾಧಿಕಾರಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಘಟನೆಯನ್ನೂ ವಿದ್ಯಾರ್ಥಿ ಪರಿಷತ್ ಪ್ರಸ್ತಾಪಿಸಿದೆ. ಮಹಿಳಾ ಸುರಕ್ಷತೆಯ ಕುರಿತು ಕಾಂಗ್ರೆಸ್ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಮಾಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದೆ.
ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೋಲಂಕಿ ಮಾತನಾಡಿ, ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ವಿದ್ಯಾರ್ಥಿ ಸಂಘಟನೆಯಲ್ಲಿರುವ ಮಹಿಳೆಯರ ಗೌರವ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ಸಂಬಂಧಪಟ್ಟ ಪದಾಧಿಕಾರಿಯನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ರಾಷ್ಟ್ರೀಯ ವಿದ್ಯಾರ್ಥಿ ಸಂಘ ಹೇಳಿಕೊಂಡಿದೆ. ಆದರೆ, ಈ ಸಂಬಂಧ ಹಿಂದಿನ ದಿನಾಂಕದ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪವಿದೆ. ಮತ್ತೊಂದೆಡೆ, ಸಂಬಂಧಪಟ್ಟ ವ್ಯಕ್ತಿಯ ಸಾಮಾಜಿಕ ಜಾಲತಾಣದ ಸ್ಥಿತಿಯಲ್ಲಿ ವೈಯಕ್ತಿಕ ಕಾರಣಗಳಿಂದ ಸ್ವಯಂ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಸೋಲಂಕಿ ತಿಳಿಸಿದರು.
ಪದಾಧಿಕಾರಿಯನ್ನು ವಜಾಗೊಳಿಸಲಾಗಿದೆ ಎಂಬ ಹೇಳಿಕೆ ಮತ್ತು ಅವರೇ ಸ್ವಯಂ ರಾಜೀನಾಮೆ ನೀಡಿದ್ದಾರೆ ಎಂಬ ಹೇಳಿಕೆಗಳ ನಡುವೆ ವ್ಯತ್ಯಾಸವಿದೆ. ಈ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಭಾವ್ಯ ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಹಾಗೂ ಅನಿವಾಸಿ ಭಾರತೀಯರ ಸಂಪರ್ಕ ಜಾಲದ ಎಲ್ಲ ಆಯಾಮಗಳ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.