
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.)
ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನಲ್ಲಿ ಎನ್ಎಸ್ಎಸ್ ಘಟಕ ಹಾಗೂ ಸ್ಪಂದನಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಬುಧವಾರ ನಡೆಯಿತು.
ಸ್ಪಂದನಾ ಬ್ಲಡ್ ಬ್ಯಾಂಕ್ನ ಡಾ. ಪ್ರಕಾಶ್ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ, ಪ್ರಸ್ತುತ ಸ್ವಯಂಪ್ರೇರಿತ ರಕ್ತದಾನಕ್ಕೆ ಹೆಚ್ಚಿನ ಮಹತ್ವವಿದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪಾದನೆಗೆ ಉತ್ತೇಜನ ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ರಕ್ತದಾನ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು, ರಕ್ತದಾನದ ಮಹತ್ವದ ಕುರಿತು ತಿಳಿಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಸಾಯಿ ಸಿಂಧು ಅವರು ನಿರೂಪಿಸಿದರು. ಶಿಬಿರವನ್ನು ಎನ್ಎಸ್ಎಸ್ ಅಧಿಕಾರಿ ರಾಜೇಶ್ ಕುಮಾರ್ ಜೆ.ಎಂ. ಹಾಗೂ ಸಮನ್ವಯ ಅಧಿಕಾರಿ ಕೆ. ಪಂಪನಗೌಡರು ಏರ್ಪಡಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್