ಮಂಡ್ಯದಲ್ಲಿ ಆಯುಧ ಪೂಜೆ ಸಂಭ್ರಮದ ನಡುವೆ ದುರಂತ: ಕಾರಿಗೆ ಸಿಲುಕಿ ನಾಲ್ಕು ವರ್ಷದ ಬಾಲಕ ಸಾವು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಬಳಿ ಆಯುಧ ಪೂಜೆ ಬಳಿಕ ಕಾರು ತೆಗೆಯುವ ವೇಳೆ ಕಾರಿಗೆ ಸಿಲುಕಿ ನಾಲ್ಕು ವರ್ಷದ ಬಾಲಕ ಕಂದನ್ ಎಸ್. ಗೌಡ ಮೃತಪಟ್ಟಿದ್ದಾನೆ. ಘಟನೆ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
mandya-ayudha-puja-tragedy-four-year-old-boy-dies-after-being-hit-by-car


ಮದ್ದೂರು, 20 ಅಕ್ಟೋಬರ್ (ಹಿ.ಸ.):

ಆಯುಧ ಪೂಜೆ ಅಂಗವಾಗಿ ಕಾರಿಗೆ ಪೂಜೆ ಸಲ್ಲಿಸಿ ವಾಹನ ತೆಗೆಯುವ ವೇಳೆ ಕಾರಿಗೆ ಸಿಲುಕಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯರಗನಹಳ್ಳಿ ಸಮೀಪ ನಡೆದಿದೆ.

ಮೃತ ಬಾಲಕನನ್ನು ಸಂಪತ್ ಕುಮಾರ್ ಅವರ ಪುತ್ರ ಕಂದನ್ ಎಸ್. ಗೌಡ (4) ಎಂದು ಗುರುತಿಸಲಾಗಿದೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಕಾರಿಗೆ ಪೂಜೆ ಸಲ್ಲಿಸಿದ ಬಳಿಕ ವಾಹನವನ್ನು ತೆಗೆಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಕಾರನ್ನು ಮೃತ ಬಾಲಕನ ಮಾವ ಚಾಲನೆ ಮಾಡುತ್ತಿದ್ದರು. ಈ ವೇಳೆ ಬಾಲಕ ಕಾರಿಗೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಬಾಲಕನ ಸಾವಿನಿಂದಾಗಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande