
ಬೆಂಗಳೂರು, 02 ಅಕ್ಟೋಬರ್ (ಹಿ.ಸ.):
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶ, ತತ್ವ ಹಾಗೂ ಸರಳ ಬದುಕಿನ ಮೌಲ್ಯಗಳನ್ನು ಯುವಜನತೆ ಅಳವಡಿಸಿಕೊಂಡು ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಕರೆ ನೀಡಿದರು.
ಗಾಂಧೀಜಿ ಹಾಗೂ ಶಾಸ್ತ್ರಿಯವರ ಜಯಂತಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಬ್ಬರೂ ನಾಯಕರು ದೇಶದ ಸ್ವಾತಂತ್ರ್ಯ, ಏಕತೆ, ಶಾಂತಿ ಹಾಗೂ ಜನಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಅವರ ಸರಳತೆ, ಪ್ರಾಮಾಣಿಕತೆ, ಶಿಸ್ತು ಮತ್ತು ದೇಶಭಕ್ತಿಯಂತಹ ಮೌಲ್ಯಗಳು ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಯುವಜನರು ಸಮಾಜದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ಅರಿತುಕೊಂಡು, ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ಹಾಗೂ ಶಾಸ್ತ್ರಿಯವರ ಕರ್ತವ್ಯನಿಷ್ಠೆ ಮತ್ತು ದೇಶಸೇವೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಇಂತಹ ಮೌಲ್ಯಾಧಾರಿತ ಯುವಶಕ್ತಿಯಿಂದ ದೇಶದ ಪ್ರಗತಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಮಂಜುನಾಥ್ ಗೌಡ ಹೇಳಿದರು. ಗಾಂಧೀಜಿಯವರ ವಿಚಾರಧಾರೆಗಳು ಸಾಮಾಜಿಕ ಸಾಮರಸ್ಯ ಹಾಗೂ ಜನಸೇವೆಗೆ ದಾರಿ ತೋರಿಸಿದರೆ, ಶಾಸ್ತ್ರಿಯವರ ಸರಳ ಜೀವನ ಮತ್ತು ಕರ್ತವ್ಯಪ್ರಜ್ಞೆ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿದೆ.
ಈ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R