
ಬೆಂಗಳೂರು, 19 ಅಕ್ಟೋಬರ್ (ಹಿ.ಸ.):
ಪಂಚ ಗ್ಯಾರಂಟಿಗಳ ನೆಪದಲ್ಲಿ ರೈತರ ಸಾಲಮನ್ನಾ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವುದರಿಂದ ಕಾಂಗ್ರೆಸ್ ಸರ್ಕಾರ ನುಣುಚಿಕೊಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಚುನಾವಣೆಗೂ ಮುನ್ನ ನೂರಾರು ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಒಂದಲ್ಲೊಂದು ನೆಪ ಹೇಳುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ರೈತರ ಸಾಲಮನ್ನಾ ಹಾಗೂ ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಜಾರಿಯನ್ನು ಮುಂದೂಡುತ್ತಿರುವುದು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.
ರೈತರ ಸಾಲಮನ್ನಾ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸರ್ಕಾರದ ವೈಫಲ್ಯವನ್ನು ಸ್ವತಃ ಪಕ್ಷದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿರುವ ಅಶೋಕ, ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಒಂದೂವರೆ ವರ್ಷ ಕಳೆದರೂ ಇನ್ನೂ ಯೋಚಿಸುತ್ತೇವೆ ಎನ್ನುವುದು ಯಾವ ನ್ಯಾಯ? ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಕಾಲಹರಣ ಮಾಡುತ್ತಿದೆ. ಚುನಾವಣೆ ವೇಳೆ ಭರವಸೆಗಳ ಸುರಿಮಳೆಗೈದು, ಅಧಿಕಾರಕ್ಕೆ ಬಂದ ಮೇಲೆ ನೆಪಗಳನ್ನು ಹೇಳುವುದೇ ಕಾಂಗ್ರೆಸ್ ಆಡಳಿತದ ಮಾದರಿಯೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು. ನೀಡಿರುವ ಭರವಸೆಗಳಿಗೆ ಕಾಲಮಿತಿ ನಿಗದಿಪಡಿಸಿ, ರೈತರು ಮತ್ತು ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರ್. ಅಶೋಕ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.