ದುಮ್ಮವಾಡದಲ್ಲಿ ಭಾರತ ಸೇವಾದಳ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ
ಹುಬ್ಬಳ್ಳಿ, 08 ಜನವರಿ (ಹಿ.ಸ.); ಆ್ಯಂಕರ್: ಭಾರತ ಸೇವಾದಳ ಜಿಲ್ಲಾ ಸಮಿತಿ ಧಾರವಾಡ, ತಾಲೂಕು ಸಮಿತಿ ಕಲಘಟಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕಲಘಟಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಶ್ರೀ ಬೂದನಗುಡ್ಡ ಬಸವೇಶ್ವ
Bhauaikyata Children's Fair


ಹುಬ್ಬಳ್ಳಿ, 08 ಜನವರಿ (ಹಿ.ಸ.);

ಆ್ಯಂಕರ್:

ಭಾರತ ಸೇವಾದಳ ಜಿಲ್ಲಾ ಸಮಿತಿ ಧಾರವಾಡ, ತಾಲೂಕು ಸಮಿತಿ ಕಲಘಟಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕಲಘಟಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಶ್ರೀ ಬೂದನಗುಡ್ಡ ಬಸವೇಶ್ವರ ಪ್ರೌಢಶಾಲೆ ಹಾಗೂ ದುಮ್ಮವಾಡ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸೇವಾದಳದ ಕಲಘಟಗಿ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಇಂದು (ಜ.08) ದುಮ್ಮವಾಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.

ಬೆಳಿಗ್ಗೆ 9 ಗಂಟೆಗೆ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಸೇವಾದಳ ಶಾಖಾ ನಾಯಕ–ನಾಯಕಿಯರು ತಮ್ಮ ತಂಡಗಳೊಂದಿಗೆ ನೋಂದಣಿ ಮಾಡಿಕೊಂಡರು. ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ನರೇಂದ್ರ ಅವರು ಧ್ವಜಾರೋಹಣ ನೆರವೇರಿಸಿದರು. ಅನಂತರ ನೂರಾರು ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೇರಿ ನಡೆಯಿತು. ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಸಮಿತಿ ಅಧ್ಯಕ್ಷ ಜಗದೀಶ್ ಕಮ್ಮಾರ ಚಾಲನೆ ನೀಡಿದರು.

ವೇದಿಕೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟಿಸಿ ಮಾತನಾಡಿ, ಭಾರತ ಸೇವಾದಳದ ಕಾರ್ಯಚಟುವಟಿಕೆಗಳಿಂದ ಶಾಲೆಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಗೌರವ, ಶಿಸ್ತು, ಶಾಂತಿ ಹಾಗೂ ಸಮಯಪಾಲನೆಯಂತಹ ಮೌಲ್ಯಗಳು ಬೆಳೆದು ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಪ್ರತಿಯೊಂದು ಶಾಲೆಯಲ್ಲೂ ಸೇವಾದಳ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.

ಜಿಲ್ಲಾ ಅಧ್ಯಕ್ಷೆ ಗೀತಾ ಸುರೇಶ್ ಮರಲಿಂಗಣ್ಣವರ ಮಾತನಾಡಿ, ದುಮ್ಮವಾಡ ಗ್ರಾಮದಲ್ಲಿ ಮಕ್ಕಳ ಮೇಳ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ಆಯೋಜನೆಯಾಗಿರುವುದು ಸಂತಸದ ವಿಷಯ. ಸಮವಸ್ತ್ರಧಾರಿಯಾಗಿ ಶಿಸ್ತುಬದ್ಧವಾಗಿ ಸಂಚರಿಸುತ್ತಿದ್ದ ಸೇವಾದಳ ಮಕ್ಕಳು ಗಿಳಿಗಳ ಹಿಂಡೆಯಂತೆ ಕಾಣುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೇವಾದಳದ ಶಾಖಾ ನಾಯಕ–ನಾಯಕಿಯರು ಪಠ್ಯ ಬೋಧನೆಯ ಜೊತೆಗೆ ಲೇಜಿಮ್, ಡಂಬೆಲ್ಸ್, ಕಾಟಿ ಪ್ರಯೋಗ, ರಾಷ್ಟ್ರಗೀತೆ, ಧ್ವಜಾರೋಹಣ–ಅವರೋಹಣ, ಧ್ವಜ ಸಂಹಿತೆ ಹಾಗೂ ದೇಶಭಕ್ತಿ ಗೀತೆಗಳ ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳ ಮೂಲಕ ಭವಿಷ್ಯದ ನಾಯಕರನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ಸಂಘಟಕ ಪ್ರಕಾಶ್ ಗೋಣಿ ಪ್ರಸ್ತಾವಿಕವಾಗಿ ಮಾತನಾಡಿ, ಭಾರತ ಸೇವಾದಳದ ಹುಟ್ಟು–ಬೆಳವಣಿಗೆ, ಶಾಲೆಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹಾಗೂ ಪ್ರಸ್ತುತ ಕಾರ್ಯಯೋಜನೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಸಮಿತಿ ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಗ್ರಾಮಸ್ಥರು ಹಾಗೂ ತಾಲೂಕಿನ ವಿವಿಧ ಶಾಲೆಗಳ ಸೇವಾದಳ ಶಾಖಾ ನಾಯಕ–ನಾಯಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎ. ಬೋರ್ಜಿಸ್ ಸ್ವಾಗತಿಸಿದರು. ತಾಲೂಕು ಸಮಿತಿ ಪದಾಧಿಕಾರಿ ಐ.ವಿ. ಜವಳಿ ನಿರೂಪಣೆ ನಡೆಸಿದರು ಹಾಗೂ ಆರ್.ಎಂ. ಹೊಲ್ತಿಕೋಟಿ ವಂದನಾರ್ಪಣೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande