
ಗದಗ, 07 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಅಪರೂಪದ ಹಾಗೂ ಗಮನ ಸೆಳೆಯುವ ಸಾಂಪ್ರದಾಯಿಕ ಕಾರ್ಯಕ್ರಮವೊಂದು ಜರುಗಿದ್ದು, ಮಕ್ಕಳ ತೊಟ್ಟಿಲು ಶಾಸ್ತ್ರವನ್ನೇ ಮೀರಿಸುವ ರೀತಿಯಲ್ಲಿ ಆಕಳು ಕರುಗಳಿಗೆ ಅದ್ಧೂರಿ ತೊಟ್ಟಿಲು ಕಾರ್ಯಕ್ರಮವನ್ನು ರೈತ ಕುಟುಂಬವೊಂದು ಆಚರಿಸಿದೆ.
ಗ್ರಾಮಸ್ಥರಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಜನರನ್ನೂ ಆಕರ್ಷಿಸಿದ ಈ ಕಾರ್ಯಕ್ರಮದಲ್ಲಿ ಧಾರ್ಮಿಕತೆ, ಸಂಪ್ರದಾಯ ಹಾಗೂ ಕೃಷಿ ಸಂಸ್ಕೃತಿಯ ಮೌಲ್ಯಗಳು ಜೀವಂತವಾಗಿ ವ್ಯಕ್ತವಾಗಿವೆ.
ಗ್ರಾಮದ ರೈತ ನಾಗರಾಜ್ ಮಡಿವಾಳರ ಅವರ ಮನೆಯ ಆಕಳು ಎರಡು ಮುದ್ದಾದ ಕರುಗಳಿಗೆ ಜನ್ಮ ನೀಡಿದ್ದು, ಈ ಸಂತಸವನ್ನು ಕುಟುಂಬದವರು ಸಂಪ್ರದಾಯಬದ್ಧವಾಗಿ ಹಬ್ಬದಂತೆ ಆಚರಿಸಿದ್ದಾರೆ. ವಿಶೇಷವೆಂದರೆ, 15 ದಿನಗಳ ಹಿಂದೆಯೇ ಆಕಳಿಗೆ ಸೀಮಂತ ಕಾರ್ಯವನ್ನು ನೆರವೇರಿಸಿದ್ದ ಈ ರೈತ ಕುಟುಂಬ, ಇದೀಗ ಕರುಗಳ ತೊಟ್ಟಿಲು ಶಾಸ್ತ್ರವನ್ನು ಕೂಡ ಅದ್ಧೂರಿಯಾಗಿ ಆಯೋಜಿಸಿದೆ. ಮನೆ ಮುಂಭಾಗ ಹಾಗೂ ತೊಟ್ಟಿಲನ್ನು ತೆಂಗಿನ ಗರಿ, ತಳಿರು ತೋರಣ, ಬಣ್ಣ ಬಣ್ಣದ ಹೂವುಗಳಿಂದ ಮನಮೋಹಕವಾಗಿ ಶೃಂಗರಿಸಲಾಗಿತ್ತು.
ಶಿವ–ಬಸವನ ತೊಟ್ಟಿಲು ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರ ಮಹಾಸ್ವಾಮಿಗಳು ಹಾಗೂ ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮಿಗಳು ಪಾಲ್ಗೊಂಡು ಕರುಗಳಿಗೆ ಆಶೀರ್ವಾದ ನೀಡಿದರು.
ಸಾಂಪ್ರದಾಯದಂತೆ ಸೋಬಾನ್ ಪದಗಳನ್ನು ಹಾಡುತ್ತಾ ಕರುಗಳನ್ನು ತೊಟ್ಟಿಲಲ್ಲಿ ಹಾಕಿ ಸಂಭ್ರಮಿಸಲಾಯಿತು. ಮಠಾಧೀಶರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ನೂರಾರು ಗ್ರಾಮಸ್ಥರು ಭಾಗವಹಿಸಿ ಸಾಕ್ಷಿಯಾದರು.
ಕಾರ್ಯಕ್ರಮದ ಪ್ರಮುಖ ಕ್ಷಣದಲ್ಲಿ ಕರುಗಳ ಕಿವಿಯಲ್ಲಿ ಶ್ರೀಗಳು ಹೆಸರುಗಳನ್ನು ಕೂಗಿ ನಾಮಕರಣ ನೆರವೇರಿಸಿದರು. ಆಕಳಿಗೆ ಜನಿಸಿದ ಅವಳಿ ಕರುಗಳಿಗೆ “ಶಿವ” ಮತ್ತು “ಬಸವ” ಎಂದು ನಾಮಕರಣ ಮಾಡುವ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸಲಾಯಿತು.
ಕರುಗಳ ತೊಟ್ಟಿಲು ಕಾರ್ಯದಲ್ಲಿ ಭಾಗವಹಿಸಿದ ಮಠಾಧೀಶರು, ರೈತರ ಬದುಕಿನಲ್ಲಿ ಹಸು-ಕರುಗಳ ಪಾತ್ರ, ಕೃಷಿ ಸಂಸ್ಕೃತಿಯ ಮಹತ್ವ ಹಾಗೂ ಪ್ರಕೃತಿಯೊಂದಿಗೆ ಇರುವ ಮಾನವನ ನಂಟಿನ ಬಗ್ಗೆ ಸಂದೇಶ ನೀಡಿದರು.
ಮಕ್ಕಳಿಗೆ ತೊಟ್ಟಿಲು ಕಾರ್ಯ ಮಾಡುವುದು ಸಾಮಾನ್ಯವಾದರೂ, ಇಲ್ಲೊಂದು ರೈತ ಕುಟುಂಬ ಆಕಳು ಕರುಗಳಿಗೆ ಇಷ್ಟೊಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ತೊಟ್ಟಿಲು ಕಾರ್ಯಕ್ರಮ ಆಯೋಜಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಗ್ರಾಮಸ್ಥರು ಈ ಕಾರ್ಯಕ್ರಮವನ್ನು “ಕೃಷಿ ಸಂಸ್ಕೃತಿಯ ಜೀವಂತ ನಿದರ್ಶನ” ಎಂದು ಬಣ್ಣಿಸಿದರು. ಹಸು-ಕರುಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ರೈತರ ಮನೋಭಾವ ಈ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿ ವ್ಯಕ್ತವಾಯಿತು.
ರಾಮಗಿರಿ ಗ್ರಾಮದಲ್ಲಿ ನಡೆದ ಈ ವಿಶಿಷ್ಟ ತೊಟ್ಟಿಲು ಕಾರ್ಯಕ್ರಮ, ಗ್ರಾಮೀಣ ಭಾರತದ ಸಂಪ್ರದಾಯ, ನಂಬಿಕೆ ಹಾಗೂ ಕೃಷಿ ಜೀವನಶೈಲಿಯ ಮಹತ್ವವನ್ನು ಮತ್ತೊಮ್ಮೆ ಸಮಾಜದ ಮುಂದಿಟ್ಟಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP