
ಕೊಪ್ಪಳ, 28 ಜನವರಿ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್) ಮಂಡನೆಗಾಗಿ ಪೂರ್ವಭಾವಿ ಸಭೆಯನ್ನು ಜನವರಿ 31ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ನೋಂದಾಯಿತ ಸರ್ಕಾರೇತರ ಸಂಘಟನೆಗಳು, ವ್ಯಾಪಾರ ಮತ್ತು ವಾಣಿಜ್ಯ ಸಂಘಗಳು ಮತ್ತು ಪುರಸಭೆಗಳ ಕಾಯ್ದೆ 1964ರ ಕಲಂ 287ರ ಪ್ರಕಾರ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳು ತನ್ನದೇ ಆದಂತಹ ಮುಂಗಡ ಪತ್ರವನ್ನು ಸಿದ್ಧತೆ ಮಾಡಿಕೊಂಡು ಮಂಡಿಸಬೇಕಾಗಿರುತ್ತದೆ. ಆದಕಾರಣ ಕೊಪ್ಪಳ ನಗರಸಭೆಯ ಸನ್ 2026-2027ನೇ ಸಾಲಿನ ಆಯ-ವ್ಯಯ (ಬಡ್ಜೆಟ್) ಮಂಡನೆಗೆ ಸಂಬಂಧಪಟ್ಟಂತೆ ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳಾದ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಈ ಪೂರ್ವಭಾವಿ ಸಭೆಯನ್ನು ಕರೆಯಲಾಗಿರುತ್ತದೆ.
ಕೊಪ್ಪಳ ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ನಗರದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಕೊಪ್ಪಳ ನಗರದ ನೋಂದಾಯಿತ ರೆಸಿಡೆಂಟ್ ವೆಲ್‍ಫೇರ್ ಆಸೋಸಿಯೇಷನ್ಸ್, ನಗರದ ಮುಖಂಡರು ಹಾಗೂ ಸಾರ್ವಜನಿಕರ ಅಮೂಲ್ಯ ಸಲಹೆ ಸೂಚನೆಗಳ ಅವಶ್ಯಕತೆ ಇದ್ದು, ಆದಕಾರಣ ಜ. 31ರ ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಜರಗುವ ಸನ್ 2026-27ನೇ ಸಾಲಿನ ಆಯ-ವ್ಯಯ (ಬಡ್ಜೆಟ್) ಪೂರ್ವಭಾವಿ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್