
ಹುಬ್ಬಳ್ಳಿ, 24 ಜನವರಿ (ಹಿ.ಸ.) :
ಆ್ಯಂಕರ್ : ವಿಬಿಜಿ–ಜಿ ರಾಮ್ ಜಿ ಕಾನೂನನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ನಿಂದಿಸುವುದನ್ನು ಬಿಟ್ಟರೆ ಜನಪರ ಕೆಲಸ ಏನನ್ನೂ ಮಾಡುತ್ತಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಯಾವ ಉಪಯೋಗವೂ ಇಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಆಯೋಜಿಸಿದ್ದ ಗೃಹ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ನರೇಗಾ ಯೋಜನೆಯನ್ನು ಕಿತ್ತುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದರ ಮೂಲಕ ರಾಜ್ಯ ಸರ್ಕಾರದ ಮೇಲೆ ಅನಗತ್ಯ ಭಾರ ಹಾಕಲಾಗುತ್ತಿದೆ. ಬಡವರಿಗೆ ಬೆಂಬಲವಾಗಿದ್ದ ಅನೇಕ ಜನಪರ ಕಾನೂನುಗಳನ್ನು ಮೂಲೆಗೆ ತಳ್ಳಲಾಗಿದೆ ಎಂದು ಆರೋಪಿಸಿದರು.
“ನಾವು ಸುಮ್ಮನೆ ಬಿಡುವುದಿಲ್ಲ. ಜಿ ರಾಮ್ ಜಿ ಕಾನೂನು ಅನುಷ್ಠಾನಕ್ಕೆ ತರಲು ಅವಕಾಶ ನೀಡುವುದಿಲ್ಲ. ಈ ಹೋರಾಟಕ್ಕೆ ಎಲ್ಲರೂ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು. ಅನುದಾನ ಹಂಚಿಕೆಯಲ್ಲೂ ಬಿಜೆಪಿಯು ಮಲತಾಯಿ ಧೋರಣೆ ತೋರುತ್ತಿದೆ. ಇಂತಹ ಮೊಂಡ ಸರ್ಕಾರಕ್ಕೆ ಪಾಠ ಕಲಿಸಲು ಬಡವರು ಒಂದಾಗಿ ಹೋರಾಟ ನಡೆಸಬೇಕಿದೆ ಎಂದರು.
ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಅಪಾಯ ಎದುರಾಗುತ್ತಿದೆ. ದೇಶದಲ್ಲಿ ಗುಲಾಮಗಿರಿ ಜಾರಿಯಾಗುವ ಆತಂಕವಿದೆ ಎಂದು ಎಚ್ಚರಿಕೆ ನೀಡಿದ ಖರ್ಗೆ, ಬಿಜೆಪಿಯ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಗೃಹಮಂಡಳಿಯಿಂದ ನಿರ್ಮಿಸಲಾದ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa