
ಗದಗ, 18 ಜನವರಿ (ಹಿ.ಸ.) :
ಆ್ಯಂಕರ್ : ದಾನ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ, ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಭರದಿಂದ ಸಾಗಿದ್ದು, ದಿನಕ್ಕೊಂದು ರಹಸ್ಯ ಬಯಲಾಗುತ್ತಿದೆ. ಇಂದು ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ಉತ್ಖನನ ಸಂದರ್ಭದಲ್ಲಿ ಪುರಾತನ ಕಾಲದ ಕೋಟೆ ಗೋಡೆ ಗೋಜರವಾಗಿದ್ದು, ಅದರ ಬಳಿ ಬೃಹತ್ ಆಕಾರದ ನಾಗರ ಹಾವು ಕಂಡು ಕಾರ್ಮಿಕರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದ ಘಟನೆ ನಡೆದಿದೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಉತ್ಖನನ ನಡೆಯುತ್ತಿದ್ದು, ಪಕ್ಕದಲ್ಲಿದ್ದ ಖಾಸಗಿ ಸಂಸ್ಥೆಯ ಶಾಲೆಯನ್ನು ಜೆಸಿಬಿ ಮೂಲಕ ತೆರವುಗೊಳಿಸುವ ವೇಳೆ ಈ ಪುರಾತನ ಕೋಟೆ ಗೋಡೆ ಪತ್ತೆಯಾಗಿದೆ. ಗೋಡೆಯ ಬಳಿ ದೊಡ್ಡ ನಾಗರ ಹಾವು ಕಾಣಿಸಿಕೊಂಡ ಪರಿಣಾಮ ಕಾರ್ಮಿಕರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಸುಮಾರು ಅರ್ಧ ಗಂಟೆಯವರೆಗೆ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಯಿತು. ಅದರಲ್ಲೂ ಇಂದು ಅಮಾವಾಸ್ಯೆಯ ದಿನವೇ ಹಾವು ಕಂಡು ಬಂದಿರುವುದು ಗ್ರಾಮಸ್ಥರಲ್ಲಿ ಹೆಚ್ಚಿನ ಆತಂಕ ಹಾಗೂ ಕುತೂಹಲ ಮೂಡಿಸಿದೆ. ನಿಧಿ ಇರುವ ಸ್ಥಳಗಳಲ್ಲಿ ಹಾವುಗಳು ಕಾಣಿಸುತ್ತವೆ ಎಂಬ ಜನಪದ ನಂಬಿಕೆಯೂ ಈ ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ಪುರಾತನ ಕೋಟೆ ಗೋಡೆಯ ಮೇಲೆಯೇ ಚಿಕ್ಕ ಗಾತ್ರದ ಪ್ರಾಚೀನ ಶಿವಲಿಂಗ ಪತ್ತೆಯಾಗಿದ್ದು, ಉತ್ಖನನ ಕಾರ್ಯಕ್ಕೆ ಮತ್ತಷ್ಟು ಮಹತ್ವ ತಂದಿದೆ. ಅಲ್ಲದೆ, ನಾಗದ ಮೂರ್ತಿಯೂ ಪತ್ತೆಯಾಗಿರುವುದು ಸ್ಥಳದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಬಿಂಬಿಸಿದೆ. ದಿನೇ ದಿನೇ ಹೊಸ ಹೊಸ ಪ್ರಾಚ್ಯವಸ್ತುಗಳು ಬೆಳಕಿಗೆ ಬರುತ್ತಿರುವುದರಿಂದ ಲಕ್ಕುಂಡಿ ಇತಿಹಾಸ ಮತ್ತೆ ಚರ್ಚೆಗೆ ಬಂದಿದೆ.
ಇತಿಹಾಸ ತಜ್ಞರು ಮತ್ತು ಸಂಶೋಧಕರು ಈ ಕುರಿತು ಪ್ರತಿಕ್ರಿಯಿಸಿ, ಚಾಲುಕ್ಯರು ಹಾಗೂ ವಿಜಯನಗರ ಅರಸರ ಆಳ್ವಿಕೆಯ ನಂತರ ನಡೆದ ಯುದ್ಧಗಳ ಸಂದರ್ಭದಲ್ಲಿ ಅನೇಕ ದೇವಸ್ಥಾನಗಳು ಹಾಳಾಗಿವೆ. ನಂತರದ ಕಾಲದಲ್ಲಿ ಸಾವಂತರರು ಹಾಗೂ ಸ್ಥಳೀಯ ಆಡಳಿತಗಾರರು ಪುರಾತನ ದೇವಸ್ಥಾನಗಳ ಅವಶೇಷಗಳು, ಸ್ಮಾರಕಗಳ ಕಲ್ಲುಗಳನ್ನು ಬಳಸಿ ಕೋಟೆ ಗೋಡೆಗಳನ್ನು ನಿರ್ಮಿಸಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋಟೆ ಗೋಡೆಯಲ್ಲಿ ದೇವಸ್ಥಾನಗಳ ಶಿಲ್ಪಗಳು ಹಾಗೂ ವಾಸ್ತುಶಿಲ್ಪದ ಭಾಗಗಳು ಕಂಡು ಬರುತ್ತಿರುವುದು ಈ ಮಾತಿಗೆ ಪೂರಕವಾಗಿದೆ.
ಲಕ್ಕುಂಡಿ ಗ್ರಾಮವು ಪುರಾತನ ಕಾಲದಲ್ಲಿ ನಾಣ್ಯ ಮುದ್ರಣ ಕೇಂದ್ರವಾಗಿತ್ತು ಎಂಬ ಇತಿಹಾಸವಿದ್ದು, ವಿಜಯನಗರ ಅರಸರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ದಾನ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಾಗಿರುವ ಲಕ್ಕುಂಡಿ ಸಿರಿ ಸಂಪತ್ತಿನ ನಾಡು ಎಂದೇ ಖ್ಯಾತಿಯಾಗಿದೆ. ಹೀಗಾಗಿ ಉತ್ಖನನ ಮುಂದುವರಿದಲ್ಲಿ ಚಿನ್ನದ ನಿಧಿ, ಮುತ್ತು, ಹವಳ, ರತ್ನಗಳು ಸೇರಿದಂತೆ ಅಪಾರ ಪ್ರಮಾಣದ ಸಿರಿ ಸಂಪತ್ತು ಹಾಗೂ ಪ್ರಾಚೀನ ಕಾಲದ ದೇವಸ್ಥಾನಗಳ ಕುರುಹುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಉತ್ಖನನ ಕಾರ್ಯಕ್ಕೆ ಹೆಚ್ಚಿನ ಮಹತ್ವ ಸಿಕ್ಕ ಹಿನ್ನೆಲೆ, ಅಧಿಕಾರಿಗಳು ತಂಡೋಪ ತಂಡವಾಗಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು, ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮಾತನಾಡಿದ ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು, “ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ರಾಜ್ಯದ ಜನರ ಗಮನ ಸೆಳೆದಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಹತ್ತಾರು ಪ್ರಾಚ್ಯವಸ್ತುಗಳು ಹಾಗೂ ಪ್ರಾಚೀನ ಶಿವಲಿಂಗಗಳು ಪತ್ತೆಯಾಗಿವೆ. ವೈಜ್ಞಾನಿಕವಾಗಿ ಉತ್ಖನನ ಮುಂದುವರಿದರೆ ಇನ್ನಷ್ಟು ಮಹತ್ವದ ಪತ್ತೆಗಳು ಸಾಧ್ಯ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ರಾಜ್ಯದ ಜನರ ನಿದ್ದೆ ಗೆಡಿಸುತ್ತಿದ್ದು, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಇನ್ನೆಷ್ಟು ರಹಸ್ಯಗಳು ಅಡಗಿವೆ ಎಂಬ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP