
ಮಂಡ್ಯ, 16 ಜನವರಿ (ಹಿ.ಸ.) :
ಆ್ಯಂಕರ್ : ಮಂಡ್ಯದ ಪತ್ರಿಕಾಭವನದಲ್ಲಿ ಇಂದು ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಮನರೇಗಾ ಯೋಜನೆಯ ರದ್ದತಿಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೇಂದ್ರ ಸರ್ಕಾರದ ಬಡವರ ವಿರೋಧಿ ಧೋರಣೆಯ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲಿರುವ ಹೋರಾಟದ ರೂಪುರೇಷೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಮನರೇಗಾ ಯೋಜನೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವುದರೊಂದಿಗೆ, ಕೃಷಿಕರ ಬದುಕು, ಗ್ರಾಮೀಣ ಆಸ್ತಿಗಳ ಸಂರಕ್ಷಣೆ, ಸ್ವತಃ ಸಮಸ್ಯೆಗಳ ಪರಿಹಾರ ಹಾಗೂ ಕನಿಷ್ಠ ಕೂಲಿ ಭರವಸೆ ನೀಡುವ ಮಹತ್ವದ ಯೋಜನೆಯಾಗಿತ್ತು ಎಂದು ಸಚಿವರು ಹೇಳಿದರು.
ಆದರೆ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸದ ಅವಧಿ ಮತ್ತು ವ್ಯಾಪ್ತಿಯನ್ನು ಸೀಮಿತಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ನೀಡುವ ಅನುಮತಿಯಷ್ಟರ ಮಟ್ಟಿಗೆ ಮಾತ್ರ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಬಡವರ ಮೇಲೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈ ಅನ್ಯಾಯದ ವಿರುದ್ಧ ‘ಮನರೇಗಾ ಬಚಾವ್’ ಹೆಸರಿನಲ್ಲಿ ರಾಜ್ಯಾದ್ಯಂತ ಭಾರೀ ಆಂದೋಲನ ನಡೆಸಲು ತೀರ್ಮಾನಿಸಲಾಗಿದ್ದು, ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಳ್ಳುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಸಮಿತಿಗಳು ಹಂತ ಹಂತವಾಗಿ ಹೋರಾಟ ನಡೆಸಲು ಸಿದ್ಧವಾಗಿವೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಪರೋಕ್ಷವಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಯಿಂದ ತೆಗೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇದನ್ನು ಕಾಂಗ್ರೆಸ್ ಪಕ್ಷ ಯಾವತ್ತಿಗೂ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa