
ದಾವಣಗೆರೆ, 15 ಜನವರಿ (ಹಿ.ಸ.) :
ಆ್ಯಂಕರ್ : ಸಮಾಜದಲ್ಲಿ ಮುಷ್ಠಿ ಇದ್ದಾಗ ಮಾತ್ರ ಶಕ್ತಿ ಇರುತ್ತದೆ. ಪಂಚಮಸಾಲಿ ಸಮುದಾಯದ ಎರಡೂ ಪೀಠಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ ನಡೆದರೂ ವಚನಾನಂದ ಸ್ವಾಮೀಜಿಗಳು ಎರಡೂ ಪೀಠಗಳು ಒಂದು ಎಂದು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ದಾವಣಗೆರೆ ಜಿಲ್ಲೆಯ ಹರಿಹರದ ಶ್ರೀ ಹರಪೀಠದಲ್ಲಿ ಹರಜಾತ್ರಾ ಮಹೋತ್ಸವ ಹಾಗೂ ಕಿತ್ತೂರು ರಾಣಿ ಚನ್ನಮ್ಮಾಜೀ ಅವರ ದ್ವೀಶತಮಾನ ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹರಿ ಮತ್ತು ಹರ ಸಂಗಮ ಕ್ಷೇತ್ರ ಹರಿಹರ, ಈ ಎರಡೂ ಭಕ್ತಗಣ ಎಲ್ಲಿ ಕೂಡುತ್ತಾರೊ ಅಲ್ಲಿ ನಮ್ಮ ಸಂಸ್ಕೃತಿ ಜಾತೆಯಾಗುತ್ತದೆ. ಹರಿಹರ ಪೀಠದಲ್ಲಿ ನಡೆಯುವ ಜಾತ್ರೆ ಬಹಳ ಅರ್ಥ ಪೂರ್ಣ ಆಗುತ್ತಿರುವುದು ಇದಕ್ಕೆ ನಮ್ಮ ಗುರುಗಳಾದ ವಚನಾನಂದ ಸ್ವಾಮೀಜಿಗಳು ಕಾರಣ, ಅವರು ಶ್ವಾಸ ಗುರುಗಳು, ಶ್ವಾಸ ಜ್ಞಾನ ಅಂದರೆ ಆದು ಅತ್ಯಂತ ಉತ್ಕೃಷ್ಟ ಜ್ಞಾನ. ನಾವೂ ಉಸಿರಾಡುತ್ತೇವೆ. ಆದರೆ ನಮಗೆ ಜ್ಞಾನ ಮತ್ತು ನಿಯಂತ್ರಣ ಇಲ್ಲ. ಯಾರು ಶ್ವಾಸವನ್ನು ನಿಯಂತ್ರಿಸುತ್ತಾರೊ ಅವರೇ ಗುರು. ಅವರು ಸಮಾಜವನ್ನೂ ಕೂಡ ಅದೇ ಶಿಸ್ತು ಮತ್ತು ನಿಯಮದಿಂದ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಕಟ್ಟಬೆಕೆಂಬ ಮಹದಾಸೆ ಹೊಂದಿದ್ದಾರೆ. ಅದು ಅಷ್ಟು ಸುಲಭದ ಮಾತಲ್ಲ, ಯೋಗಾ ಗುರುಗಳ ಸಾಧನೆ ಸುಲಭವಲ್ಲ. ಅವರು ಮಾಡಿರುವ ಸಾಧನೆ ನೋಡಿದಾಗ ಈ ಸಮಾಜವನ್ನು ಧಾರ್ಮಿಕವಾಗಿ ಆದ್ಯಾತ್ಮಿಕ ಶೈಕಣಿಕ ಸಮಾಜಿಕವಾಗಿ ಆದರ್ಶ ಸಮಾಜ ಕಟುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಅವರಿಗೆ ಸಿರಿಗೆರೆಯ ಪೀಠದ ಸ್ವಾಮೀಜಿಗಳ ಮಾರ್ಗದರ್ಶನ ಇದೆ. ನಾವು ಎಲ್ಲರೂ ಒಂದೇ ಪೀಠ ಮಾಡಬೇಕೆಂದು ಎಲ್ಲರೂ ಬಯಸಿದ್ದೇವು. ಆದರೆ ಎರಡು ಪೀಠ ಆಗಿವೆ. ಆಗಿನಿಂದ ಹಲವಾರು ಸವಾಲುಗಳನ್ನು ಎದುರಿಸಿದ್ದೇವೆ. ಸಮಾಜ ಮುಷ್ಟಿ ಇದ್ದಾಗ ಶಕ್ತಿ ಇರುತ್ತದೆ ಮಠಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಉಂಟು ಮಾಡುವ ಪ್ರಸಂಗ ಬಂದರೂ ಕೂಡ ವಚನಾನಂದ ಸ್ವಾಮೀಜಿಗಳು ಹೇಳಿದಂತೆ ಹಲವಾರು ಆರೋಪ ಬಂದರೂ ಕೂಡ ಎರಡೂ ಪೀಠ ಒಂದು ಎಂದು ಸಾರಿದ್ದಾರೆ. ಅವರಿಗೆ ಹೃದಯ ತುಂಬಿದ ಅಭಿನಂದನೆ. ಹೃದಯಗಳ ಬೆಸುಗೆ ಆಗಬೇಕು ಅಂತಹ ಕೆಲಸವನ್ನು ವಚನಾನಂದ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಹೇಳಿದರು.
ನಮ್ಮದು ಕಾಯಕ ನಿಷ್ಠ ಸಮಾಜ, ರೈತಾಪಿ ಸಮಾಜ ಮಣ್ಣಿನ ಜೊತೆಗೆ ಹಣ್ಣಾಗಿ ಮಣ್ಣಿನಲ್ಲಿ ಬೆವರು ಸುರಿಸಿ ಬಂಗಾರದ ಬೆಳೆ ಬೆಳೆಯುವ ಸಮಾಜ. ಯಾರು ಮಣ್ಣಿನೊಂದಿಗೆ ಇರುತ್ತಾರೊ ಅವರು ಪ್ರಾಮಾಣಿಕರಿರುತ್ತಾರೆ. ನಿಷ್ಠೆಯಿಂದ ಇರುತ್ತಾರೆ. ಘಟ್ಟದ ಮೇಲೆ ಇರುವವರು ಕಷ್ಟದ ಕೆಲಸ ಮಾಡತ್ತಾರೆ. ಸಮುದ್ರದ ತಟದಲ್ಲಿ ಇರವವರು ಸಾಹಸಿಗಳು, ಮಣ್ಣಿನ ಜೊತೆಗೆ ಇರುವವರು ಪ್ರಾಮಾಣಿಕರು. ಐದು ಸಾವಿರ ವರ್ಷಗಳಿಂದ ಈ ಮಣ್ಣಿನ ಸಾರ ಉಳಿಸಿಕೊಂಡು ಬಂದವರು ಯಾವುದೇ ಸಕಾರ ಅಲ್ಲ. ರೈತ, ಕೆಳಗಿದ್ದ ಮಣ್ಣು ಮೇಲೆ ಬರಬೇಕು. ಮೇಲಿದ್ದ ಮಣ್ಣು ಕೆಳಗೆ ಬರಬೇಕು ಆಗ ಮಣ್ಣಿನ ಸಾರ ಉಳಿಯುತ್ತದೆ. ಯಾರಿಗೆ ನಿದ್ದೆ ಬರುವುದಿಲ್ಲ ಅವರ ಬಳಿ ಹಾಸಿಗೆ ಇದೆ. ಯಾರಿಗೆ ನಿದ್ದೆ ಬರುತ್ತದೆ ಅವರ ಬಳಿ ಹಾಸಿಗೆ ಇಲ್ಲ. ಮೈ ಮುರಿದು ದುಡಿದರೆ ಹಾಸಿಗೆ ಇದ್ದವನಿಗೂ ನಿದ್ದೆ ಬರುತ್ತದೆ. ಮೈ ಮುರಿದು ದುಡಿದವನಿಗೆ ಆರ್ಥಿಕ ಶಕ್ತಿ ಬಂದರೆ ಅವನಿಗೂ ಹಾಸಿಗೆ ಸಿಗುತ್ತದೆ. ಆದರೆ ಎರಡಕ್ಕೂ ಶ್ರಮ ಬೇಕು. ಶ್ರಮದ ಫಲದಿಂದಲೇ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.
ಭೂಮಿ ಎಷ್ಟಿದೆ ಅಷ್ಟೇ ಇದೆ. ಆದರೆ, ಅದನ್ನು ಅವಲಂಬಿಸಿದವರು ಹೆಚ್ಚಾಗಿದ್ದಾರೆ. ಆದರಿಂದ ನಾವು ವಿದ್ಯೆ ಕಲಿತು ಬೇರೆ ಬೇರೆ ವೃತ್ತಿಯಲ್ಲಿ ಹೋಗಬೇಕು. ಆ ನಿಟ್ಟಿನಲಿ ಶ್ರೀಮಠ ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳ ಕಡೆಗೆ ಗಮನ ಕೊಡಬೇಕು. ಅಗತ್ಯವಿದ್ದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಿ ಮಕ್ಕಳಿಗೆ ಅವಕಾಶ ಮಾಡಬೇಕು. ಈ ಜೀವನದಲ್ಲಿ ಧ್ಯಾನ ಮತ್ತು ಜ್ಞಾನ ಎರಡೂ ಮುಖ್ಯ ವಚನಾನಂದ ಗುರುಗಳಲ್ಲಿ ಎರಡೂ ಇದೆ. ಸಿರಿಗೆರೆ ಜಗದ್ಗುರುಗಳ ಮಾರ್ಗದರ್ಶನ, ವಾಲ್ಮೀಕಿ ಜಗದ್ಗುರುಗಳ ಸ್ನೇಹವೂ ಇದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ, ಅಕ್ಕ ಮಹಾದೇವಿ ಈ ಸಮಾಜದಲ್ಲಿ ಹುಟ್ಟಿ ಭವಿಷ್ಯದಲ್ಲಿ ಮಿಂಚಬೇಕು. ಭಕ್ತಿಯ ಮುಂದೆ ಯಾವುದೇ ಶಕ್ತಿ ಇಲ್ಲ. ಅಂತಹ ಭಕ್ತಿಯನ್ನು ಎಲ್ಲರೂ ತೋರಿಸಿದ್ದೀರಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು, ಹರಪೀಠ ಹರಿಹರ, ಡಾ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ತರಳಬಾಳು ಮಠ, ಸಿರಿಗೆರೆ, ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ವಾಲ್ಮೀಕಿ ಪೀಠ, ರಾಜನಹಳ್ಳಿ, ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಮಡಿವಾಳ ಪೀಠ, ಚಿತ್ರದುರ್ಗ, ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಸಿದ್ದರಹಳ್ಳಿ ಶ್ರೀಗಳವರು ಸಾನಿಧ್ಯ ವಹಿಸಿದ್ದರು. ಕೇಂದ್ರ ಜಲಶಕ್ತಿ ಹಾಗೂ ರೇಲ್ವೆ ಖಾತೆಗಳ ರಾಜ್ಯ ಸಚಿವರಾ ವಿ.ಸೋಮಣ್ಣ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa