
ಬೀದರ್, 11 ಜನವರಿ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯನ್ನು ಹಂತಹಂತವಾಗಿ ದುರ್ಬಲಗೊಳಿಸಿ, ಇದೀಗ ಉದ್ಯೋಗದ ಖಾತರಿಯೇ ಇಲ್ಲದ ‘ವಿಬಿ ಜಿ ರಾಮ್ ಜಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರುವ ಮೂಲಕ ನರೇಗಾವನ್ನು ರದ್ದುಪಡಿಸುವ ಉದ್ದೇಶ ಹೊಂದಿರುವುದು ಗ್ರಾಮೀಣ ಭಾರತದ ಆರ್ಥಿಕತೆಗೆ ಭಾರೀ ಕೊಡಲಿಯೇಟು ಆಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ಬೀದರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆ ದೇಶದ ಕೋಟ್ಯಂತರ ಬಡ, ಕಾರ್ಮಿಕ ಹಾಗೂ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಖಾತರಿಯೊಂದಿಗೆ ಆಹಾರ ಭದ್ರತೆ, ಮಾನವೀಯ ಗೌರವ ಹಾಗೂ ಆರ್ಥಿಕ ಸ್ಥಿರತೆ ಒದಗಿಸಿದ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರಿನ ನೈತಿಕ ಬಲ ಹೊಂದಿದ್ದ ಈ ಯೋಜನೆಯನ್ನು ದುರ್ಬಲಗೊಳಿಸುವುದು ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಬಡವರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಉದ್ಯೋಗದ ಖಾತರಿಯೇ ಇಲ್ಲದ ಹೊಸ ಯೋಜನೆಗಳ ಮೂಲಕ ಗ್ರಾಮೀಣ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಅನ್ಯಾಯದ ವಿರುದ್ಧ ಈಗಲೂ ಧ್ವನಿಯೆತ್ತದೆ ಮೌನವಾಗಿದ್ದರೆ, ಮುಂದಿನ ದಿನಗಳಲ್ಲಿ ದೇಶವು ಗಂಭೀರ ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಖಂಡ್ರೆ ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ “ನರೇಗಾ ಉಳಿಸಿ” ಜನಾಂದೋಲನವು ಬಡವರ ಬದುಕು ಉಳಿಸುವ ಹೋರಾಟವಾಗಿದ್ದು, ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರು ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa